Virat Kohli: ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿಗೆ ಅಗ್ನಿಪರೀಕ್ಷೆ..! | Major update on Virat Kohli’s comeback to Team India


ಈ ಬಾರಿ ಏಷ್ಯಾಕಪ್​ ಟಿ20 ಮಾದರಿಯಲ್ಲಿ ನಡೆಯಲಿದ್ದು, ಹೀಗಾಗಿ ಚುಟುಕು ಕ್ರಿಕೆಟ್​ ಮೂಲಕ ಕಿಂಗ್ ಕೊಹ್ಲಿ ಫಾರ್ಮ್​ಗೆ ಮರಳಬೇಕಾದ ಅನಿವಾರ್ಯತೆ ಇದೆ.

ವೆಸ್ಟ್ ಇಂಡೀಸ್ ವಿರುದ್ದ್ದದ ಟಿ20 ಸರಣಿಯ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ (Team India) ಜಿಂಬಾಬ್ವೆ ವಿರುದ್ದ ಏಕದಿನ ಸರಣಿ ಆಡಲಿದೆ. ಆಗಸ್ಟ್ 18 ರಿಂದ 22 ರವರೆಗೆ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ವಿಶೇಷ ಎಂದರೆ ಈ ಸರಣಿಯಿಂದಲೂ ವಿರಾಟ್ ಕೊಹ್ಲಿ (Virat Kohli) ಹೊರಗುಳಿದಿದ್ದಾರೆ. ಅಂದರೆ ಸೌತ್ ಆಫ್ರಿಕಾ ವಿರುದ್ದದ ಸರಣಿಯಿಂದ ಹೊರಗುಳಿದಿದ್ದ ಕೊಹ್ಲಿ, ಆ ಬಳಿಕ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಅದನಂತರ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಿಂದ ವಿಶ್ರಾಂತಿ ಪಡೆದಿದ್ದರು. ಹೀಗಾಗಿ ಜಿಂಬಾಬ್ವೆ ವಿರುದ್ದದ ಸರಣಿಯ ಮೂಲಕ ಕಂಬ್ಯಾಕ್ ಮಾಡಲಿದ್ದಾರೆ ಎನ್ನಲಾಗಿತ್ತು.

ಆದರೀಗ ಜಿಂಬಾಬ್ವೆ ವಿರುದ್ದದ ಸರಣಿಯಿಂದಲೂ ವಿರಾಟ್ ಹೊರಗುಳಿದಿದ್ದಾರೆ. ಹೀಗಾಗಿ ಕಿಂಗ್ ಕೊಹ್ಲಿಯ ಕಂಬ್ಯಾಕ್ ಯಾವಾಗ ಎನ್ನುವ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ಏಷ್ಯಾಕಪ್. ಅಂದರೆ ಮುಂಬರುವ ಏಷ್ಯಾಕಪ್ ಮೂಲಕ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.

ಆಗಸ್ಟ್ 22 ಕ್ಕೆ ಜಿಂಬಾಬ್ವೆ ವಿರುದ್ದದ ಏಕದಿನ ಸರಣಿ ಮುಗಿಯಲಿದೆ. ಇದಾದ ಬಳಿಕ ಯುಎಇನಲ್ಲಿ ಆಗಸ್ಟ್ 27 ರಿಂದ ಏಷ್ಯಾಕಪ್ ಶುರುವಾಗಲಿದೆ. ಇನ್ನು ಭಾರತ ಏಷ್ಯಾಕಪ್ ಅಭಿಯಾನವನ್ನು ಆಗಸ್ಟ್ 28 ರಂದು ಶುರು ಮಾಡಲಿದೆ ಎಂದು ವರದಿಯಾಗಿದೆ. ಅದರಂತೆ ಆಗಸ್ಟ್ 28 ರಂದು ವಿರಾಟ್ ಕೊಹ್ಲಿ ಮತ್ತೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಬಾರಿ ಏಷ್ಯಾಕಪ್​ ಟಿ20 ಮಾದರಿಯಲ್ಲಿ ನಡೆಯಲಿದ್ದು, ಹೀಗಾಗಿ ಚುಟುಕು ಕ್ರಿಕೆಟ್​ ಮೂಲಕ ಕಿಂಗ್ ಕೊಹ್ಲಿ ಫಾರ್ಮ್​ಗೆ ಮರಳಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಇಂಗ್ಲೆಂಡ್ ವಿರುದ್ದ ಆಡಿದ 6 ಇನಿಂಗ್ಸ್​ಗಳಲ್ಲಿ ವಿರಾಟ್ ಕೊಹ್ಲಿ ಕಲೆಹಾಕಿದ ಗರಿಷ್ಠ ಸ್ಕೋರ್ 20 ರನ್​. ಹೀಗಾಗಿಯೇ ಏಷ್ಯಾಕಪ್ ವಿರಾಟ್ ಕೊಹ್ಲಿಯ ಪಾಲಿಗೆ ಅಗ್ನಿಪರೀಕ್ಷೆಯಾಗಿರಲಿದೆ.

ಏಕೆಂದರೆ ಏಷ್ಯಾಕಪ್​ನಲ್ಲಿ ಕಾಣಿಸಿಕೊಳ್ಳುವ ತಂಡವೇ ಟಿ20 ವಿಶ್ವಕಪ್​ನಲ್ಲೂ ಕಣಕ್ಕಿಳಿಯುವ ಸಾಧ್ಯತೆಯಿದೆ. ಹೀಗಾಗಿ ಏಷ್ಯಾಕಪ್​ನಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರರು ತಂಡದಿಂದ ಹೊರಬೀಳುವ ಸಾಧ್ಯತೆ ಹೆಚ್ಚು. ಹಾಗಾಗಿ ಏಷ್ಯಾಕಪ್​ ಮೂಲಕ ವಿರಾಟ್ ಕೊಹ್ಲಿ ತಮ್ಮ ಹಳೆಯ ಬ್ಯಾಟಿಂಗ್ ಖದರ್ ತೋರಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ.

ಮತ್ತೊಂದೆಡೆ ವಿರಾಟ್ ಕೊಹ್ಲಿಯ ಫಾರ್ಮ್​ ಬಗ್ಗೆ ಅಪಸ್ವರಗಳು ಕೇಳಿಬರುತ್ತಿದ್ದು, ಹೀಗಾಗಿ ಮುಂಬರುವ ಟೂರ್ನಿಯಲ್ಲಿನ ಪ್ರದರ್ಶನವು ಟಿ20 ವಿಶ್ವಕಪ್​ ತಂಡದಲ್ಲಿನ ಕಿಂಗ್ ಕೊಹ್ಲಿಯ ಸ್ಥಾನವನ್ನು ನಿರ್ಧರಿಸಲಿದೆ. ಅದರಂತೆ ಏಷ್ಯಾಕಪ್​ ಮೂಲಕ ಕಂಬ್ಯಾಕ್ ಮಾಡಲಿರುವ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ತಂಡದಲ್ಲಿ ಖಾಯಂ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

ಜಿಂಬಾಬ್ವೆ ವಿರುದ್ದದ ಏಕದಿನ ಸರಣಿಗೆ ಟೀಮ್ ಇಂಡಿಯಾ ಹೀಗಿದೆ:
ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ ಮತ್ತು ದೀಪಕ್ ಚಹರ್.

TV9 Kannada


Leave a Reply

Your email address will not be published. Required fields are marked *