Virat Kohli: ನಾಯಕತ್ವ ಯಾರ ಜನ್ಮಸಿದ್ಧ ಹಕ್ಕಲ್ಲ: ಕೊಹ್ಲಿಗೆ ಚಾಟಿ ಬೀಸಿದ ಗೌತಮ್ ಗಂಭೀರ್ | Gambhir On Virat Kohli: ‘Captaincy Not Anyone’s Birthright


Virat Kohli: ನಾಯಕತ್ವ ಯಾರ ಜನ್ಮಸಿದ್ಧ ಹಕ್ಕಲ್ಲ: ಕೊಹ್ಲಿಗೆ ಚಾಟಿ ಬೀಸಿದ ಗೌತಮ್ ಗಂಭೀರ್

Gambhir On Virat Kohli

ಜನವರಿ 19 ರಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa Odi) ನಡುವೆ 3 ಏಕದಿನ ಪಂದ್ಯಗಳ ಸರಣಿ ಶುರುವಾಗಲಿದೆ. ಏಕದಿನ ನಾಯಕತ್ವದಿಂದ ವಜಾಗೊಂಡ ನಂತರ ವಿರಾಟ್ ಕೊಹ್ಲಿಗೆ (Virat Kohli) ಇದು ಮೊದಲ ಸರಣಿ ಎಂಬುದು ವಿಶೇಷ. ಇದೀಗ ಟೆಸ್ಟ್ ತಂಡದ ನಾಯಕತ್ವಕ್ಕೂ ಕೊಹ್ಲಿ ರಾಜೀನಾಮೆ ನೀಡಿ ಸುದ್ದಿಯಲ್ಲಿದ್ದಾರೆ. ಇದರೊಂದಿಗೆ ಏಕದಿನ ಸರಣಿಗೂ ಮುನ್ನ ಕೊಹ್ಲಿಯ ನಡೆ ಚರ್ಚಾ ವಿಷಯವಾಗಿದೆ. ಇಂತಹ ಟಿವಿ ಚರ್ಚೆಯಲ್ಲಿ ಭಾಗವಹಿಸಿದ್ದ ಗೌತಮ್ ಗಂಭೀರ್ (Gautam Gambhir), ಟೀಮ್ ಇಂಡಿಯಾದ (Team India) ನಾಯಕತ್ವ ಎಂಬುದು ಯಾರದ್ದೂ ಕೂಡ ಜನ್ಮಸಿದ್ಧ ಹಕ್ಕಲ್ಲ. ಕಪ್ತಾನಗಿರಿ ಇಲ್ಲದಿದ್ದರೂ, ತಂಡಕ್ಕೆ ಆಡಬೇಕಾಗುತ್ತದೆ. ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ಆಡಿಲ್ವಾ? ಇದೀಗ ಅಂತಹದ್ದೇನು ವಿಶೇಷತೆ ಇದೆ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ನಾನು ಏಕದಿನ ತಂಡದ ನಾಯಕನಾಗಿ ಮುಂದುವರೆಯಬೇಕೆಂದು ಬಯಸಿದ್ದೆ ಎಂಬ ಕೊಹ್ಲಿಯ ಹೇಳಿಕೆಗೆ ಗಂಭೀರ್ ಟಾಂಗ್ ನೀಡಿದ್ದಾರೆ.

ನನ್ನ ಪ್ರಕಾರ ನಾಯಕತ್ವ ಯಾವುದೇ ಆಟಗಾರನ ಹಕ್ಕಂತು ಅಲ್ಲ ಎಂದಿರುವ ಗಂಭೀರ್, ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ತಮ್ಮ ಜವಾಬ್ದಾರಿಯನ್ನು ವಿರಾಟ್ ಕೊಹ್ಲಿಗೆ ಹಸ್ತಾಂತರಿಸಿದರು. ಮೂರು ಐಸಿಸಿ ಟ್ರೋಫಿ ಗೆದ್ದ ಸಾಧನೆಯ ಬಳಿಕ ಅವರು ವಿರಾಟ್ ನಾಯಕತ್ವದಲ್ಲಿ ಆಡಿದ್ದಾರೆ. ಈಗ ವಿರಾಟ್ ಬದಲು ಬೇರೆಯವರು ತಂಡದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇದು ಹೀಗೆಯೇ ಮುಂದುವರಿಯುತ್ತದೆ. ಹೀಗಾಗಿ ನಾಯಕತ್ವದಿಂದ ಕೆಳಗಿಳಿದ ಮಾತ್ರಕ್ಕೆ ಬ್ಯಾಟಿಂಗ್​ನಲ್ಲಿ ಬದಲಾವಣೆ ಕಂಡು ಬರಲಿದೆ ಎಂದು ನಾನು ಭಾವಿಸುವುದಿಲ್ಲ ಎಂದು ಗಂಭೀರ್ ಹೇಳಿದ್ದಾರೆ.

ಇದೇ ವೇಳೆ ಇಂತಹ ಸಂದರ್ಭಗಳಲ್ಲಿ ವಿರಾಟ್ ಕೊಹ್ಲಿ ರನ್ ಗಳಿಸುವತ್ತ ಗಮನ ಹರಿಸುವುದು ಮುಖ್ಯ ಎಂದಿರುವ ಗಂಭೀರ್, ಭಾರತ ಪರ ಆಡುವ ಕನಸು ಕಾಣುತ್ತಿರುವಾಗ ನಾನು ನಾಯಕನಾಗುತ್ತೇನೆ ಎಂದು ಯೋಚಿಸುವುದಿಲ್ಲ. ನೀವು ಭಾರತಕ್ಕಾಗಿ ಪಂದ್ಯಗಳನ್ನು ಗೆಲ್ಲುವ ಬಗ್ಗೆ ಯೋಚಿಸುತ್ತೀರಿ. ನಾಯಕನಾದ ಬಳಿಕ ಕೂಡ ಹೆಚ್ಚು ಬದಲಾಗುವುದಿಲ್ಲ. ಈಗ ಒಂದು ವ್ಯತ್ಯಾಸವೆಂದರೆ ನೀವು ಟಾಸ್‌ಗೆ ಹೋಗುವುದಿಲ್ಲ ಅಷ್ಟೇ. ನಿಮ್ಮ ಶಕ್ತಿ ಮತ್ತು ಹೋರಾಟದ ಮನೋಭಾವ ಒಂದೇ ಆಗಿರಬೇಕು, ಏಕೆಂದರೆ ದೇಶಕ್ಕಾಗಿ ಆಡುವುದು ಯಾವಾಗಲೂ ಹೆಮ್ಮೆಯ ವಿಷಯ ಎಂದು ಗಂಭೀರ್ ತಿಳಿಸಿದರು.

ಅಷ್ಟೇ ಅಲ್ಲದೆ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಕೊಹ್ಲಿ ಪಾತ್ರದಲ್ಲಿ ಒಂದು ತುಣುಕಿನ ಬದಲಾವಣೆಯೂ ಆಗುವುದಿಲ್ಲ. ಅವರ ನಾಯಕತ್ವದ ಅವಧಿಯಲ್ಲಿ ಅವರು ನಿರ್ವಹಿಸುತ್ತಿದ್ದ ಪಾತ್ರವನ್ನೇ ಈಗಲೂ ಮಾಡುತ್ತಾರೆ ಅಷ್ಟೇ. ಅವರು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮುಂದುವರಿಸುತ್ತಾರೆ ಮತ್ತು ಅವರ ಗಮನವು ಸಾಧ್ಯವಾದಷ್ಟು ಹೆಚ್ಚು ರನ್ ಗಳಿಸುವುದರ ಮೇಲೆ ಇರುತ್ತದೆ. ಅಲ್ಲದೆ, ಈಗ ಇನ್ನಿಂಗ್ಸ್ ನಿಭಾಯಿಸುವ ಜವಾಬ್ದಾರಿಯೂ ಅವರ ಹೆಗಲ ಮೇಲಿರುತ್ತದೆ. ರೋಹಿತ್ ಶರ್ಮಾ ತಂಡಕ್ಕೆ ಮರಳಿದಾಗ ಮತ್ತು ಕೆಎಲ್ ರಾಹುಲ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದಾಗ, ಕೊಹ್ಲಿ ಪಾತ್ರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಗಂಭೀರ್ ಹೇಳಿದರು.

ಈ ಮೂಲಕ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಮಾತ್ರಕ್ಕೆ ಏನೋ ಬದಲಾವಣೆ ಆಗಲಿದೆ ಎಂದೆಲ್ಲಾ ನಿರೀಕ್ಷಿಸಬೇಡಿ. ಅವರು ಈ ಹಿಂದೆ ಆಡಿದ್ದೂ ಭಾರತಕ್ಕೆ, ಈಗಲೂ ಅದನ್ನೇ ಮಾಡುತ್ತಾರೆ ಎಂದು ಗಂಭೀರ್ ಹೇಳಿದರು.

TV9 Kannada


Leave a Reply

Your email address will not be published. Required fields are marked *