Virat Kohli: ಪಾಕಿಸ್ತಾನ ವಿರುದ್ಧ 3 ಸಿಕ್ಸ್ ಸಿಡಿಸಿದ್ರೆ ಸಾಕು: ವಿರಾಟ್ ಕೊಹ್ಲಿ ಖಾತೆಗೆ ಸೇರಲಿದೆ ಶತಕದ ದಾಖಲೆ | Virat Kohli is just three sixes away from joining Rohit in the list of players with 100 T20I sixes


India vs Pakistan, Asia Cup 2022: ಇಂದು ಪಾಕಿಸ್ತಾನ ವಿರುದ್ಧ ಸೂಪರ್ 4 ಹಂತದಲ್ಲಿ ಭಾರತ ಪುನಃ ಮುಖಾಮುಖಿ ಆಗಲಿದೆ. ಇಲ್ಲಿ ವಿರಾಟ್ ಕೊಹ್ಲಿ ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ.

ಏಷ್ಯಾಕಪ್ 2022 ರಲ್ಲಿ (Asia Cup 2022) ವಿರಾಟ್ ಕೊಹ್ಲಿ ಬ್ಯಾಟ್​ನಿಂದ ರನ್​ಗಳು ಬರುತ್ತಿದ್ದು ಫಾರ್ಮ್​ಗೆ ಮರಳಿದಂತೆ ಗೋಚರಿಸುತ್ತಿದೆ. ಐಸಿಸಿ ಟಿ20 ವಿಶ್ವಕಪ್​ಗೂ ಮುನ್ನ ಕೊಹ್ಲಿಯ ಈ ಪ್ರದರ್ಶನ ಟೀಮ್ ಇಂಡಿಯಾಕ್ಕೆ ಖುಷಿ ತಂದಿದೆ. ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 34 ಎಸೆತಗಳಲ್ಲಿ 35 ರನ್ ಗಳಿದರೆ, ಹಾಂಗ್ ಕಾಂಗ್ ವಿರುದ್ಧ 44 ಎಸೆತಗಳಲ್ಲಿ ಅಜೇಯ 59 ರನ್ ಸಿಡಿಸಿದ್ದರು. ಇಂದು ಪಾಕಿಸ್ತಾನ ವಿರುದ್ಧ ಸೂಪರ್ 4 ಹಂತದಲ್ಲಿ ಭಾರತ (India vs Pakistan) ಪುನಃ ಮುಖಾಮುಖಿ ಆಗಲಿದೆ. ಇಲ್ಲಿ ವಿರಾಟ್ ಕೊಹ್ಲಿ (Virat Kohli) ಮೇಲೆ ಎಲ್ಲರ ಕಣ್ಣಿದ್ದು ಯಾವರೀತಿ ಪ್ರದರ್ಶನ ನೀಡುತ್ತಾರೆ ಎಂಬುದನ್ನು ನೋಡಬೇಕಿದೆ. ಇದರ ನಡುವೆ ಕಿಂಗ್ ಕೊಹ್ಲಿ ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 3 ಸಿಕ್ಸರ್ ಸಿಡಿಸಿದರೆ ವಿಶೇಷ ಶತಕದ ದಾಖಲೆ ನಿರ್ಮಾಣವಾಗಲಿದೆ. ಕೊಹ್ಲಿ ಬ್ಯಾಟ್​ನಿಂದ ಇಂದು ಮೂರು ಸಿಕ್ಸ್ ಬಂದರೆ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 100 ಸಿಕ್ಸರ್ ಬಾರಿಸಿದ ಸಾಧನೆ ಮಾಡಲಿದ್ದಾರೆ. ಈ ವಿಶೇಷ ದಾಖಲೆ ನಿರ್ಮಿಸಿದ ಭಾರತದ ಎರಡನೇ ಆಟಗಾರ ಎಂಬ ಕೀರ್ತಿಗೂ ಭಾಜನರಾಗಲಿದ್ದಾರೆ. ಜೊತೆಗೆ ಡೇವಿಡ್ ವಾರ್ನರ್, ಕ್ರಿಸ್ ಗೇಲ್ ಮತ್ತು ಇಯಾನ್ ಮಾರ್ಗನ್ ಸಾಲಿಗೆ ಸೇರಲಿದ್ದಾರೆ.

ಕೊಹ್ಲಿ ಸದ್ಯ 101 ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ 97 ಸಿಕ್ಸರ್ ಬಾರಿಸಿದ್ದಾರೆ. ಭಾರತ ಪರ ಅತಿ ಹೆಚ್ಚು ಸಿಕ್ಸ್ ಸಿಡಿಸಿದವರ ಸಾಲಿನಲ್ಲಿ ರೋಹಿತ್ ಶರ್ಮಾ ಅವರಿದ್ದು 134 ಪಂದ್ಯಗಳಿಂದ 165 ಸಿಕ್ಸ್ ಸಿಡಿಸಿದ್ದಾರೆ. ಇದೀಗ ಕೊಹ್ಲಿ ಬ್ಯಾಟ್​ನಿಂದ ಮೂರು ಸಿಕ್ಸರ್ ಬಂದರೆ ಚುಟುಕು ಮಾದರಿಯ ಕ್ರಿಕೆಟ್​ನಲ್ಲಿ 100 ಸಿಕ್ಸರ್ ಬಾರಿಸಿದ ಭಾರತದ ಎರಡನೇ ಹಾಗೂ ವಿಶ್ವದ 10ನೇ ಆಟಗಾರ ಆಗಲಿದ್ದಾರೆ.

ಇಂದು ಭಾರತಪಾಕ್ ಪಂದ್ಯ:

ಏಷ್ಯಾಕಪ್ 2022ರ ಸೂಪರ್ 4 ಹಂತದಲ್ಲಿ ಇಂದು ಎರಡನೇ ಪಂದ್ಯ ಆಯೋಜಿಸಲಾಗಿದ್ದು ಕ್ರಿಕೆಟ್ ಲೋಕದ ಬದ್ದವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲಿದೆ. ಈ ಬಾರಿಯ ಏಷ್ಯಾಕಪ್​ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಅಮೋಘ ಗೆಲುವು ಕಂಡಿರುವ ಟೀಮ್ ಇಂಡಿಯಾ ಜಯದ ನಾಗಾಲೋಟವನ್ನು ಮುಂದುವರೆಸುವ ತವಕದಲ್ಲಿದೆ. ಇತ್ತ ಲೀಗ್ ಹಂತದಲ್ಲಿ ಭಾರತ ವಿರುದ್ಧ ಸೋತ ಪಾಕಿಸ್ತಾನ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಹೀಗಾಗಿ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

TV9 Kannada


Leave a Reply

Your email address will not be published.