ಸಾಂದರ್ಭಿಕ ಚಿತ್ರ
ಕಾಲ ಬದಲಾದ ಹಾಗೆ ಕಾಲಕ್ಕೆ ತಕ್ಕಂತೆ ನಮ್ಮ ಆಹಾರ ವ್ಯವಸ್ಥೆಯಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಮುಖ್ಯ. ಅದರಲ್ಲಿಯೂ ಮುಖ್ಯವಾಗಿ ಚಳಿಗಾಲದ ಸಮಯದಲ್ಲಿ ಆರೋಗ್ಯವನ್ನು ಎಷ್ಟು ಸುರಕ್ಷಿತವಾಗಿ ಕಾಯ್ದುಕೊಂಡರೂ ಸಾಲದು. ನೀವು ತೂಕ ಇಳಿಸಿಕೊಳ್ಳಬೇಕು ಅಂದುಕೊಂಡಿದ್ದರೆ, ಚಳಿಗಾಲದ ಸಮಯದಲ್ಲಿ ನೀವು ಸೇವಿಸಬಹುದಾದ ಆಹಾರ ಪದಾರ್ಥಗಳಾವುವು? ಎಂಬುದರ ಕುರಿತಾಗಿ ತಜ್ಞರು ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನೀವು ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ತೂಕ ಇಳಿಸಿಕೊಳ್ಳಲು ಸಹಾಯಕವಾಗುವ ಸಲಹೆಗಳು ಈ ಕೆಳಗಿನಂತಿವೆ.
ಮುಖ್ಯವಾಗಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಪೌಷ್ಟಿಕತಜ್ಞರಾದ ಅಜ್ರಾಖಾನ್ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಈ ಕುರಿತಂತೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಕೆಲವು ಆಹಾರ ಪದಾರ್ಥಗಳು ನಿಮ್ಮ ಉತ್ತಮ ಆರೋಗ್ಯ ಕಾಪಾಡುವುದರ ಜೊತೆಗೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಕ್ಯಾರೆಟ್
ಕ್ಯಾರೆಟ್ನಲ್ಲಿ ಫೈಬರ್ ಅಂಶ ಅಧಿಕವಾಗಿರುತ್ತದೆ. ನೀವು ದಿನಪೂರ್ತಿ ಚಟುವಟಿಕೆಯಿಂದ ಕೂಡಿರಲು ಇದು ಸಹಾಯ ಮಾಡುತ್ತದೆ. ನಿಮಗೆ ಪೋಷಕಾಂಶವನ್ನು ನೀಡುವುದರ ಜೊತೆಗೆ ಹೆಚ್ಚುವರಿ ತೂಕ ಇಳಿಕೆಗೆ ಸಹಾಯಕವಾಗಿದೆ. ಹಾಗಾಗಿ ನೀವು ಕ್ಯಾರೆಟ್ನಿಂದ ತಯಾರಿಸಿದ ಅಡುಗೆ ಸವಿಯಬಹುದು ಇಲ್ಲವೇ ಜ್ಯೂಸ್ ಮಾಡಿಯೂ ಸಹ ಸವಿದು ಆರೋಗ್ಯ ಸುಧಾರಿಸಿಕೊಳ್ಳಬಹುದಾಗಿದೆ.
ದಾಲ್ಚಿನ್ನಿ
ದಾಲ್ಚಿನ್ನಿಯನ್ನು ಅಡುಗೆಯಲ್ಲಿ ಮಸಾಲಾ ಪದಾರ್ಥವಾಗಿ ಬಳಸುತ್ತೇವೆ. ದಾಲ್ಚಿನ್ನಿ ನೈಸರ್ಗಿಕವಾಗಿ ಚಯಾಪಚಯವನ್ನು ಉತ್ತೇಜಿಸುತ್ತದೆ ಮತ್ತು ತೂಕ ನಷ್ಟವನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ಇನ್ಸುಲಿನ್ನ ಉತ್ತೇಜಕವೂ ಆಗಿದೆ ಎಂದು ತಜ್ಞರು ಹೇಳಿದ್ದಾರೆ.
ಮೆಂತ್ಯ
ಮೆಂತ್ಯ ಬೀಜಗಳು ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಸಹಾಯಕಾರಿ. ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಜೊತೆಗೆ ತೂಕ ನಷ್ಟಕ್ಕೆ ಸಹಾಯಕ ಎಂದು ತಜ್ಞರು ಹೇಳಿದ್ದಾರೆ.
ಪೇರಲ
ಪೇರಲದಲ್ಲಿ ಶೇ. 12ರಷ್ಟು ಫೈಬರ್ ಅಂಶ ಕಂಡುಬರುತ್ತದೆ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಉತ್ತಮ ಜೀರ್ಣಕ್ರಿಯೆಗೆ ಸಹಾಯಕವಾಗುವ ಹಣ್ಣು ಇದಾಗಿದ್ದು, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಪಾಲಾಕ್- ಹಸಿರು ಸೊಪ್ಪು
ಪಾಲಾಕ್ ಸೇವನೆಯು ತೂಕ ನಷ್ಟ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ದೇಹದ ಹೆಚ್ಚುವರು ಕ್ಯಾಲೊರಿಗಳನ್ನು ಕರಗಿಸಲು ಸಹಾಯ ಮಾಡುತ್ತದೆ. ಪಾಲಾಕ್ನಲ್ಲಿ ಕರಗದ ನಾರಿನಾಂಶ ಹೇರಳವಾಗಿದ್ದು, ಇದು ತೂಕ ಇಳಿಕೆಗೆ ಸಹಾಯ ಮಾಡುವ ಪ್ರಮುಖ ಅಂಶವಾಗಿದೆ ಎಂದು ತಜ್ಞರು ಹೇಳಿದ್ದಾರೆ.