Weight Loss: ತೂಕ ಇಳಿಸಿಕೊಳ್ಳಲು ಜಿಮ್​ನಲ್ಲಿ ಗಂಟೆಗಟ್ಟಲೆ ವರ್ಕ್​ಔಟ್ ಮಾಡೋ ಬದಲು ಹೀಗೆ ಮಾಡಿ ನೋಡಿ | Weight Loss No need to spend hours at the gym Top 5 tips to Weight Loss effortlessly Health Tips


Weight Loss: ತೂಕ ಇಳಿಸಿಕೊಳ್ಳಲು ಜಿಮ್​ನಲ್ಲಿ ಗಂಟೆಗಟ್ಟಲೆ ವರ್ಕ್​ಔಟ್ ಮಾಡೋ ಬದಲು ಹೀಗೆ ಮಾಡಿ ನೋಡಿ

ಸಂಗ್ರಹ ಚಿತ್ರ

ಇಂದಿನ ಆಧುನಿಕ ಜೀವನಶೈಲಿಯಲ್ಲಿ ಬೊಜ್ಜು ಅಥವಾ ಕೊಲೆಸ್ಟ್ರಾಲ್ ಸಾನ್ಯವಾಗಿಬಿಟ್ಟಿದೆ. ತೂಕ ಇಳಿಸುವುದು ಸುಲಭದ ವಿಷಯವೇನಲ್ಲ. ತೂಕ ಇಳಿಸಿಕೊಂಡು ಫಿಟ್ ಆಗಿ ಕಾಣಲೆಂದು ದಿನವೂ ಕೋಟ್ಯಂತರ ಜನರು ಜಿಮ್​ನಲ್ಲಿ ಬೆವರು ಹರಿಸುತ್ತಾರೆ. ನೀವು ಕೂಡ ತೂಕ ಕಡಿಮೆ ಮಾಡಿಕೊಳ್ಳಲು ಜಿಮ್​ನಲ್ಲಿ ಗಂಟೆಗಟ್ಟಲೆ ವರ್ಕ್​ಔಟ್ ಮಾಡುತ್ತೀರಾ? ಅದರ ಬದಲು ನಿಗದಿತ ಪ್ರಮಾಣದಲ್ಲಿ ನಿರ್ದಿಷ್ಟ ಆಹಾರಗಳನ್ನು ಒಳಗೊಂಡಂತೆ ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸಿದರೆ ಸುಲಭವಾಗಿ ಬೊಜ್ಜು ಕರಗಿಸಬಹುದು. ನಮ್ಮ ದೇಹಕ್ಕೆ ಏನು ಬೇಕು, ನಮ್ಮ ನಾಲಿಗೆಯ ಚಪಲವನ್ನು ಯಾವ ರೀತಿ ನಿಯಂತ್ರಣ ಮಾಡಬೇಕು ಎಂಬುದರ ಬಗ್ಗೆ ಗಮನರಿಸಿದರೆ ತೂಕ ಇಳಿಸುವುದು ಬಹಳ ಕಷ್ಟವೇನಲ್ಲ. ಸುಲಭವಾಗಿ ಮತ್ತು ಬೇಗ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವ ಕೆಲವು ಸರಳ ಮಾರ್ಗಗಳು ಇಲ್ಲಿವೆ.

ಎದ್ದ 2 ಗಂಟೆಯೊಳಗೆ ಉಪಹಾರ ಸೇವಿಸಿ:
ಎಷ್ಟೋ ಜನರು ಬೆಳಗ್ಗೆ ತಿಂಡಿಯನ್ನೇ ತಿನ್ನುವುದಿಲ್ಲ. ಒಂದು ಹೊತ್ತಿನ ಉಪಹಾರವನ್ನು ಬಿಟ್ಟರೆ ತೂಕ ಕಡಿಮೆಯಾಗುತ್ತದೆ ಎಂಬುದು ಅವರ ಭ್ರಮೆ. ನಮ್ಮ ದೇಹಕ್ಕೆ ಬೆಳಗಿನ ಉಪಾಹಾರ ಬಹಳ ಮುಖ್ಯ. ಬೆಳಗಿನ ಉಪಾಹಾರವನ್ನು ತ್ಯಜಿಸುವುದು ದಿನದಲ್ಲಿ ಹೆಚ್ಚಿನ ಕ್ಯಾಲೋರಿ ಸೇವನೆಯನ್ನು ತಪ್ಪಿಸಲು ಉತ್ತಮ ಮಾರ್ಗವಾಗಿದೆ. ಬೆಳಗ್ಗೆ ತಿಂಡಿ ತಿನ್ನದೆ ಇರುವುದರಿಂದ ಕೊಬ್ಬಿನ ಶೇಖರಣೆಯಾಗುತ್ತದೆ. ಏಕೆಂದರೆ ರಾತ್ರಿಯಿಂದ ಮರುದಿನ ಮಧ್ಯಾಹ್ನದವರೆಗೆ ಏನೂ ಘನ ಪದಾರ್ಥವನ್ನು ಸೇವಿಸದಿದ್ದರೆ ದೇಹವು ಹಸಿವಿನ ಮೋಡ್‌ಗೆ ಹೋಗುವುದರಿಂದ ಹೆಚ್ಚುವರಿ ಕ್ಯಾಲೊರಿಗಳು ಕೊಬ್ಬಿನಂತೆ ಸಂಗ್ರಹವಾಗುತ್ತದೆ.

ಹೆಚ್ಚು ಸೇಬು ಹಣ್ಣುಗಳನ್ನು ಸೇವಿಸಿ:
ಸೇಬು ಹಣ್ಣಿನಲ್ಲಿ ಫೈಬರ್, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿವೆ. ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ತಪ್ಪಿಸಲು ಸೇಬುಗಳು ಉತ್ತಮ ಮಾರ್ಗ. ಈ ಸೇಬು ಹಣ್ಣು ನಿಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಬಹಳ ಸಹಕಾರಿ. ನಿಮ್ಮ ಅನಾರೋಗ್ಯಕರ ತಿಂಡಿಗಳ ಬದಲು ದಿನಕ್ಕೊಂದು ಸೇಬು ತಿಂದರೆ ಅದರಿಂದಾಗುವ ಪ್ರಯೋಜನಗಳನ್ನು ನೀವೇ ಅನುಭವಿಸುತ್ತೀರಿ. ಸೇಬು ಹಸಿವಿನ ಸಂಕಟಗಳನ್ನು ಕೊಲ್ಲುತ್ತದೆ ಮತ್ತು ನಿಮಗೆ ಎನರ್ಜಿ ಕೊಡುತ್ತದೆ.

ಸಾಕಷ್ಟು ನೀರು ಕುಡಿಯಿರಿ:
ಜಲಸಂಚಯನವು ನಮ್ಮ ಆರೋಗ್ಯದ ಕೀಲಿಯಾಗಿದೆ. ನಾವು ಕುಡಿಯುವ ನೀರಿನ ಪ್ರಮಾಣ ಹೆಚ್ಚಾದಷ್ಟೂ ನಮ್ಮ ಜೀರ್ಣಕ್ರಿಯೆ ಉತ್ತಮವಾಗಿ, ನಮ್ಮ ದೇಹದ ಎಲ್ಲ ಅಂಗಗಳೂ ಆರೋಗ್ಯವಾಗಿರುತ್ತವೆ. ನೀರು ಹೆಚ್ಚಾಗಿ ಕುಡಿಯುವುದರಿಂದ ದೇಹದ ತೂಕವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಪ್ರತಿದಿನ ಎಂಟು ಗ್ಲಾಸ್ ನೀರು ಕುಡಿಯುವುದು ಉತ್ತಮ ಚರ್ಮದ ಆರೋಗ್ಯ ಮತ್ತು ಚಯಾಪಚಯ ಕ್ರಿಯೆಗೆ ಸಹಕಾರಿ. ಒಂದು ನಿಂಬೆಹಣ್ಣನ್ನು ಹಿಸುಕಿ, ಒಂದು ಲೋಟ ಬೆಚ್ಚಗಿನ ನೀರಿಗೆ ಅರ್ಧ ಟೀ ಚಮಚ ಜೇನುತುಪ್ಪವನ್ನು ಸೇರಿಸಿ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಚಯಾಪಚಯ ಕ್ರಿಯೆ ವೇಗಗೊಳ್ಳುತ್ತದೆ. ಹಾಗೇ, ಊಟಕ್ಕೆ ಮುಂಚೆಯೇ ಒಂದು ಲೋಟ ನೀರು ಕುಡಿಯುವುದರಿಂದ ಹೊಟ್ಟೆ ಬೇಗನೆ ತುಂಬಿದಂತೆ ಭಾಸವಾಗುತ್ತದೆ. ಇದರಿಂದ ನೀವು ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವುದು ತಪ್ಪುತ್ತದೆ. ಇದರಿಂದ ನಿಮ್ಮ ದೇಹದಲ್ಲಿ ಕ್ಯಾಲೋರಿ ಕೂಡ ಕಡಿಮೆಯಾಗುತ್ತದೆ.

ದೊಡ್ಡ ಪ್ಲೇಟ್​ಗಳ ಬದಲು ಸಣ್ಣ ಪ್ಲೇಟ್‌ ಬಳಸಿ:
ನಿಮ್ಮ ಊಟ ಅಥವಾ ತಿಂಡಿಯನ್ನು ತಿನ್ನುವಾಗ ದೊಡ್ಡ ತಟ್ಟೆಗಳ ಬದಲು ಚಿಕ್ಕ ಪ್ಲೇಟ್‌ಗಳಲ್ಲಿ ತಿನ್ನಿ. ಇದು ನಿಮ್ಮ ಮೆದುಳನ್ನು ನೀವು ಸಾಮಾನ್ಯವಾಗಿ ತಿನ್ನುವುದಕ್ಕಿಂತ ಹೆಚ್ಚು ತಿನ್ನುತ್ತಿದ್ದೀರಿ ಎಂದು ಯೋಚಿಸುವಂತೆ ಮಾಡುತ್ತದೆ. ಹೀಗಾಗಿ, ನಿಮಗರಿವಿಲ್ಲದೆ ನೀವು ದಿನನಿತ್ಯಕ್ಕಿಂತ ಕಡಿಮೆ ಆಹಾರ ಸೇವಿಸಲಾರಂಭಿಸುತ್ತೀರಿ.

ಉತ್ತಮ ಆಹಾರಕ್ರಮಕ್ಕೆ ಬದ್ಧರಾಗಿರಿ:
ಜನರು ತೂಕವನ್ನು ಕಳೆದುಕೊಳ್ಳುವ ಸಲುವಾಗಿ ಡಯೆಟ್ ಎಂದು ಏನೇನೋ ತಿನ್ನುತ್ತಾರೆ ಅಥವಾ ಏನನ್ನೂ ಸರಿಯಾಗಿ ತಿನ್ನುವುದಿಲ್ಲ. ಇದರಿಂದ ಯಾವ ಪ್ರಯೋಜನವೂ ಇಲ್ಲ. ನೀವು ಏನನ್ನೇ ತಿಂದರೂ ಹಿತಮಿತವಾಗಿ ತಿಂದರೆ ಅದರಿಂದ ಕ್ಯಾಲೋರಿಯನ್ನು ಕಡಿಮೆ ಮಾಡಬಹುದು. ನಿಮ್ಮ ಆಹಾರದಲ್ಲಿ ಕ್ಯಾಲೋರಿ, ಕಾರ್ಬೋಹೈಡ್ರೇಟ್ ಇರುವ ಪದಾರ್ಥಗಳ ಬದಲಾಗಿ ಹಣ್ಣು, ತರಕಾರಿ, ಮೊಳಕೆ ಕಾಳುಗಳು, ಮೊಟ್ಟೆಯಂತಹ ಪದಾರ್ಥಗಳನ್ನು ಹೆಚ್ಚು ಬಳಸಿ.

(ಎಲ್ಲರ ದೇಹ ಪ್ರಕೃತಿಯೂ ಒಂದೇ ರೀತಿ ಇರುವುದಿಲ್ಲ. ಹೀಗಾಗಿ, ಈ ಮೇಲಿನ ಸಲಹೆಗಳನ್ನು ಅಳವಡಿಸಿಕೊಳ್ಳುವ ಮೊದಲು ಡಯಟಿಷಿಯನ್​ ಸಲಹೆ ಪಡೆಯುವುದು ಸೂಕ್ತ)

TV9 Kannada


Leave a Reply

Your email address will not be published. Required fields are marked *