
ಸಾಂದರ್ಭಿಕ ಚಿತ್ರ
ಇನ್ನು ವರ್ಕ್ ಫ್ರಮ್ ಹೋಮ್ ಸಾಕು, ಕಚೇರಿಗಳಿಗೆ ಹಿಂತಿರುಗಿ ಎಂದು ಈ ಭಾರತೀಯ ಕಂಪೆನಿಗಳು ಉದ್ಯೋಗಿಗಳಿಗೆ ಹೇಳಿದ ಮೇಲೆ 800 ಮಂದಿ ಎರಡು ತಿಂಗಳಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ.
ಐದಲ್ಲ, ಹತ್ತಲ್ಲ ಒಟ್ಟು 800 ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ ಅಂದರೆ ನಂಬುತ್ತೀರಾ? ಎಡ್ಟೆಕ್ ಸ್ಟಾರ್ಟ್ಅಪ್ ವೈಟ್ಹ್ಯಾಟ್ ಜೂನಿಯರ್ WhiteHat Jrಗೆ ಕಳೆದ ಎರಡು ತಿಂಗಳಲ್ಲಿ ರಾಜೀನಾಮೆ (Resignation) ನೀಡಿರುವವರ ಸಂಖ್ಯೆ ಇದು. ಹಾಗೆ ರಾಜೀನಾಮೆ ನೀಡುವುದಕ್ಕೆ ಕಾರಣ ಏನು ಅಂತೀರಾ? ಇನ್ನು ವರ್ಕ್ ಫ್ರಮ್ ಹೋಮ್ ಸಾಕು, ವರ್ಕ್ ಫ್ರಮ್ ಆಫೀಸ್ ಶುರು ಮಾಡಬೇಕು ಬನ್ನಿ ಎಂದು ಕರೆಯಲಾಗಿದೆ, ಅಷ್ಟೇ. ಈ ವೈಟ್ಹ್ಯಾಟ್ ಜೂನಿಯರ್ ಒಡೆತನ ಬೈಜೂಸ್ ಬಳಿಯಿದೆ. ಈ ಸ್ಟಾರ್ಟ್ಅಪ್ ಅನ್ನು 2020ನೇ ಇಸವಿಯಲ್ಲಿ 300 ಮಿಲಿಯನ್ ಅಮೆರಿಕನ್ ಡಾಲರ್ಗೆ ಖರೀದಿಸಲಾಗಿದೆ. ಮಾರ್ಚ್ 18, 2022ರಂದು ಕಂಪೆನಿಯಾದ್ಯಂತ ಕಳುಹಿಸಿದ ಇಮೇಲ್ನಲ್ಲಿ, ರಿಮೋಟ್ ವರ್ಕಿಂಗ್ ಮಾಡುತ್ತಿರುವವರು ಅದನ್ನು ನಿಲ್ಲಿಸಿ, ಇನ್ನೊಂದು ತಿಂಗಳೊಳಗೆ ಆಯಾ ಕಚೇರಿಗಳಿಗೆ ಹಿಂತಿರುಗಲು ಕೇಳಲಾಗಿದೆ. Inc42 ವರದಿ ಮಾಡಿರುವಂತೆ, ಮಾರಾಟ, ಕೋಡಿಂಗ್ ಮತ್ತು ಗಣಿತ ತಂಡವನ್ನು ಗುರುಗ್ರಾಮ್, ಮುಂಬೈ ಹಾಗೂ ಬೆಂಗಳೂರು ಕಚೇರಿಗಳಿಂದ ಕಾರ್ಯ ನಿರ್ವಹಿಸುವಂತೆ ತಿಳಿಸಲಾಗಿದೆ.
ಇದಾದ ಮೇಲೆ ಸಾಮೂಹಿಕವಾಗಿ ರಾಜೀನಾಮೆಗಳ ಸಲ್ಲಿಕೆ ಆಗಿದೆ. ಮಾರಾಟ, ಕೋಡಿಂಗ್ ಹಾಗೂ ಗಣಿತ ತಂಡವು ಸೇರಿದಂತೆ ಕಂಪೆನಿಯಾದ್ಯಂತ 800ರಷ್ಟು ಪೂರ್ಣಾವಧಿ ಉದ್ಯೋಗಿಗಳು ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ಕಚೇರಿ ಸ್ಥಳಗಳಿಗೆ ಹಿಂತಿರುಗಲು ಇಷ್ಟವಿಲ್ಲದ ಕಾರಣವನ್ನು ನೀಡಿ, ಇಂಥದ್ದೊಂದು ನಿರ್ಧಾರ ಕೈಗೊಂಡಿದ್ದಾರೆ.
“ಕೆಲಸಕ್ಕೆ ಮತ್ತೆ ಹಿಂತಿರುಗುವ ಭಾಗವಾಗಿ ನಮ್ಮ ಮಾರಾಟ ವಿಭಾಗ ಮತ್ತು ಸಪೋರ್ಟ್ ಉದ್ಯೋಗಿಗಳನ್ನು ಏಪ್ರಿಲ್ 18ನೇ ತಾರೀಕಿನಿಂದ ಗುರುಗ್ರಾಮ್ ಮತ್ತು ಮುಂಬೈ ಕಚೇರಿಗಳಿಗೆ ಬರುವಂತೆ ಕೇಳಲಾಯಿತು. ವೈದ್ಯಕೀಯ ಮತ್ತು ವೈಯಕ್ತಿಕ ಕಾರಣಗಳು ಇರುವವರಿಗೆ ವಿನಾಯಿ ನೀಡಿದ್ದೆವು. ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡುವ ಅವಕಾಶ ನೀಡುವ ಬಗ್ಗೆ ಹೇಳಿದ್ದೆವು. ನಮ್ಮ ಶಿಕ್ಷಕರು ವರ್ಕ್ ಫ್ರಮ್ ಹೋಮ್ ಮುಂದುವರಿಸಲಿದ್ದಾರೆ,” ಎಂದು WhiteHat Jr ಹೇಳಿರುವುದಾಗಿ ವರದಿ ಆಗಿದೆ.
ಅಂದಹಾಗೆ, WhiteHat Jr ನಷ್ಟದಲ್ಲಿ ನಡೆಯುತ್ತಿದೆ. ಹಣಕಾಸು ವರ್ಷ 2021ಕ್ಕೆ 1690 ಕೋಟಿ ರೂಪಾಯಿ ಒಟ್ಟು ನಷ್ಟವನ್ನು ದಾಖಲಿಸಿದೆ. ಏಪ್ರಿಲ್ 1, 2020ರಿಂದ ಮಾರ್ಚ್ 31, 2021ರ ಮಧ್ಯೆ ಈ ಸ್ಟಾರ್ಟ್ ಅಪ್ ಕಂಪೆನಿ ತನ್ನ ಕಾರ್ಯಾಚರಣೆ ಮೂಲಕ 483.9 ಕೋಟಿ ಗಳಿಸಿದ್ದು, ಒಟ್ಟು ವೆಚ್ಚ 2,175.2 ಕೋಟಿ ರೂಪಾಯಿ ದಾಖಲಿಸಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ