ಯೋಗಾಸನ
ಚಳಿಗಾಲದಲ್ಲಿ ದೇಹವು ಜಡಗಟ್ಟಿದಂತಾಗಿರುತ್ತದೆ. ಹಲವರು ಆಹಾರದ ಮೂಲಕ ದೇಹವನ್ನು ಬೆಚ್ಚಗಿರಿಸಲು ಪ್ರಯತ್ನಿಸುತ್ತಾರೆ. ಆದರೆ ಬದಲಾದ ಜೀವನ ಶೈಲಿಯಲ್ಲಿ ಜನರು ಡಯಟ್ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಆದ್ದರಿಂದ ಆಹಾರವಲ್ಲದೇ ಹೇಗೆ ದೇಹವನ್ನು ಬೆಚ್ಚಗಿರಿಸಬಹುದು? ಜೊತೆಗೆ ಫಿಟ್ನೆಸ್ ಕೂಡ ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಯೋಗ ಇವುಗಳಿಗೆ ಉತ್ತಮ ಮಾರ್ಗವಾಗಿದೆ. ಮನೆಯಲ್ಲೇ ಮಾಡಬಹುದಾದ ಹಾಗೂ ದೇಹವನ್ನು ಫಿಟ್ ಆಗಿರಿಸುವ ಕೆಲವು ಆಸನಗಳು ಇಲ್ಲಿವೆ.
ವಸಿಷ್ಠಾಸನ:
- ಯೋಗ ಮ್ಯಾಟ್ ಮೇಲೆ ನಿಮ್ಮ ಕೈಯನ್ನು ಊರಿ ಕುಳಿತುಕೊಳ್ಳಿ ಮತ್ತು ಕಾಲುಗಳನ್ನು ನೇರವಾಗಿ ಚಾಚಿ.
- ಕೈಯ ಬಲವನ್ನು ಬಳಸಿಕೊಂಡು ನಿಮ್ಮ ದೇಹವನ್ನು ಮೇಲಕ್ಕೆತ್ತಿ. ದೇಹವು ನೆಲಕ್ಕೆ 45 ಡಿಗ್ರಿ ಕೋನದಲ್ಲಿರಬೇಕು.
- ಇನ್ನೊಂದು ಕೈಯನ್ನು ನೇರವಾಗಿ ಗಾಳಿಯಲ್ಲಿ ಚಾಚಿ.
- ನೆಲದ ಸಂಪರ್ಕದಲ್ಲಿರುವ ಕಾಲಿನ ಮೇಲೆ ಇನ್ನೊಂದು ಕಾಲನ್ನಿಟ್ಟು ವಿಶ್ರಾಂತಿ ಮಾಡಿ, ಇದನ್ನು ವಸಿಷ್ಠಾಸನ ಎಂದು ಕರೆಯಲಾಗುತ್ತದೆ.
ನವಾಸನ:
- ಯೋಗ ಮ್ಯಾಟ್ ಮೇಲೆ ಕುಳಿತುಕೊಳ್ಳಿ
- ಕಾಲುಗಳನ್ನು ಸ್ಟ್ರೆಚ್ ಮಾಡುತ್ತಾ ಮೇಲಕ್ಕೆತ್ತಿ.
- ನೆಲದಿಂದ 45 ಡಿಗ್ರಿ ಕೋನದಲ್ಲಿ ನಿಮ್ಮ ಕಾಲುಗಳಿವೆಯೇ ಎಂದು ಗಮನಿಸಿ.
- ಸೊಂಟವನ್ನು ಆಧಾರವಾಗಿರಿಸುತ್ತಾ ದೇಹವನ್ನು ಮೇಲಕ್ಕೆತ್ತಿ.
- ಕೈಗಳನ್ನು ವಿಸ್ತರಿಸಿ.
- ಇಂಗ್ಲೀಷ್ನ ‘ಎ’(A) ಯ ತಿರುವು ಮುರುವಾಗಿ ನಿಮ್ಮ ದೇಹ ಇರುವಂತೆ ಕಾಣಿಸುತ್ತದೆ. ಇದಕ್ಕೆ ನವಾಸನ ಎನ್ನುತ್ತಾರೆ.
ಶೀರ್ಷಾಸನ:
- ಈ ಆಸನಕ್ಕೆ ನೀವು ಗೋಡೆಯನ್ನೂ ಆಧಾರವಾಗಿ ಬಳಸಬಹುದು.
- ನಿಮ್ಮ ಮೊಣಕೈಗಳನ್ನು ನೆಲದ ಮೇಲೆ ಇರಿಸಿ ಮತ್ತು ಅವುಗಳ ನಡುವೆ ನಿಮ್ಮ ತಲೆಯನ್ನು ಇರಿಸಿ.
- ದೇಹವನ್ನು ಬ್ಯಾಲೆನ್ಸ್ ಮಾಡಿ.
- ದೇಹವನ್ನು ತಲೆಕೆಳಗಾಗಿಸಿದ ನಂತರ, ಅದೇ ಭಂಗಿಯಲ್ಲಿ ವಿಶ್ರಾಂತಿ ಪಡೆಯಿರಿ.
- ಕನಿಷ್ಠ ಐದು ನಿಮಿಷಗಳ ಕಾಲ ಅದೇ ಸ್ಥಾನದಲ್ಲಿದಿರಿ, ಇದನ್ನು ಶೀರ್ಷಾಸನ ಎನ್ನುತ್ತಾರೆ.
ಸೇತುಬಂಧಾಸನ:
- ಯೋಗ ಮ್ಯಾಟ್ ಮೇಲೆ ಮಲಗಿ.
- ನಿಮ್ಮ ದೇಹಕ್ಕೆ ಹೊಂದಿಕೊಂಡಂತೆ ಕೈಗಳನ್ನು ನೇರವಾಗಿರಿಸಿಕೊಳ್ಳಿ.
- ನಿಮ್ಮ ಕಾಲುಗಳ ಪಾದಗಳು ಮ್ಯಾಟ್ಗೆ ಹೊಂದಿಕೊಂಡಂತೆ ಊರಿ.
- ನಂತರ ನಿಧಾನವಾಗಿ ಸೊಂಟವನ್ನು ಮೇಲಕ್ಕೆತ್ತಿ.
- ದೇಹವು ಸೇತುವೆಯ ಆಕಾರವನ್ನು ತಾಳುತ್ತದೆ. ಇದಕ್ಕೆ ಸೇತುಬಂಧಾಸನ ಎನ್ನುತ್ತಾರೆ.
ಶವಾಸನ:
- ಯೋಗ ಮ್ಯಾಟ್ ಮೇಲೆ ಮಲಗಿ.
- ವಿಶ್ರಾಂತಿ ಪಡೆಯಿರಿ. ನಂತರ ತಲೆಯಿಂದ ದೇಹದ ಒಂದೊಂದೇ ಅಂಗವನ್ನು ಮನದಲ್ಲೇ ಗಮನಿಸುತ್ತಾ ಸಾಗಿ.
- ದೇಹದಿಂದ ಒತ್ತಡಗಳು ನಿಧಾನವಾಗಿ ನಿವಾರಣೆಯಾಗುವುದು ನಿಮ್ಮ ಗಮನಕ್ಕೆ ಬರುತ್ತದೆ.
- 10ರಿಂದ 15 ನಿಮಿಷಗಳ ಕಾಲ ಅದೇ ಸ್ಥಿತಿಯಲ್ಲಿರಿ. ಇದನ್ನು ಶವಾಸನ ಎನ್ನುತ್ತಾರೆ.