Woman Scientist: ನಿಮ್ಮ ಟೈಮ್​ಲೈನ್; ‘ನಾನು ಎನ್ನುವ ಈ ಚೈತನ್ಯಪಯಣದೊಳಗೆ’ ಮೂಷಕ ತಜ್ಞೆ ಡಾ. ಶಕುಂತಲಾ ಶ್ರೀಧರ | Nimma Timeline Life Journey of Scientist Dr Shakuntala Shridhar


Woman Scientist: ನಿಮ್ಮ ಟೈಮ್​ಲೈನ್; ‘ನಾನು ಎನ್ನುವ ಈ ಚೈತನ್ಯಪಯಣದೊಳಗೆ’ ಮೂಷಕ ತಜ್ಞೆ ಡಾ. ಶಕುಂತಲಾ ಶ್ರೀಧರ

ಮೂಷಕ ತಜ್ಞೆ ಡಾ. ಶಕುಂತಲಾ ಶ್ರೀಧರ

ನಿಮ್ಮ ಟೈಮ್​ಲೈನ್ | Nimma Timeline :ನನ್ನ ತಂದೆ ಎಪ್ಪತ್ತೆರಡು ವರ್ಷ ಬದುಕಿದ್ದರು, ಅದೂ ಕ್ಯಾನ್ಸರ್​ನಂಥ ಮಾರಕ ರೋಗವನ್ನು ಗೆದ್ದು. ಆದರೆ ತಾಯಿ ನತದೃಷ್ಟೆ. ಜೀವನ ಪೂರಾ ಮಕ್ಕಳಿಗೋಸ್ಕರ ಜೀವ ತೇದು, ಡಯಾಬಿಟೀಸ್, ಹೃದಯ ಸಂಬಂದಿ ಕಾಯಿಲೆಗಳಿಗೆ ತುತ್ತಾಗಿ ಅರವತ್ತೆರಡು ವರ್ಷಕ್ಕೆ ಕೈಚೆಲ್ಲಿ ದೇವರ ಪಾದ ಸೇರಿದಳು. ಅವರಿಬ್ಬರ ಹಿರಿಯ ಮಗಳಾದ ನಾನು ಮೊನ್ನೆ ಏಪ್ರಿಲ್ 10 ಕ್ಕೆ 75 ವಸಂತಗಳನ್ನು ಕಂಡೆ. ಮುಕ್ಕಾಲು ಶತಮಾನ ಜೀವಿಸುವುದು ಅದೂ ಊಹಿಸಲಾಗದ ಏರುಪೇರುಗಳನ್ನು ಬಾಳಲ್ಲಿ ಕಂಡು, ಮುಳುಗದೆ ದೋಣಿಯಲ್ಲಿ ತೇಲುವ ಹಂತಕ್ಕೆ ಬಂದು ನಿಂತಾಗ ನನ್ನ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ. ಇದರಲ್ಲಿ ಯಾವುದೇ ಹಮ್ಮಿಲ್ಲ. ಜೀವನ ಹೀಗೂ ಇರಬಲ್ಲದೆ ಎಂದು ನನಗೂ ಅನ್ನಿಸುವ ಮಟ್ಟಿಗೆ ನನ್ನ ಬಾಳಪ್ರಯಾಣ ಸಾಗುತ್ತಾ ಇದೆ. ಅಷ್ಟೆಲ್ಲಾ ಕಾರ್ಪಣ್ಯಗಳ ನಡುವೆಯೂ 75 ವರ್ಷ ಬದುಕಿದ್ದು ಒಂದು ವಿಸ್ಮಯವೇ ಸರಿ.’ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಮೂಷಕ ತಜ್ಞೆಯಾಗಿದ್ದ ಡಾ. ಶಕುಂತಲಾ ಶ್ರೀಧರ್ (Shakuntala Shridhara), ಎಪ್ಪತ್ತೈದರ ಹೊಸ್ತಿಲಲ್ಲಿ ನಿಂತಾಗ ಪಡದದ್ದೇನು ಕಳೆದದ್ದೇನು, ಗೆದ್ದಿದೆಷ್ಟು, ಸೋತಿದೆಷ್ಟು, ಅತ್ತಿದೆಷ್ಟು, ಸಂಭ್ರಮಿಸಿದೆಷ್ಟು ಎಂಬುದನ್ನಿಲ್ಲಿ ಹಂಚಿಕೊಂಡಿದ್ದಾರೆ.

(ಭಾಗ 1) 

ನನ್ನ 74 ನೇ ವರ್ಷದಲ್ಲಿ ನಾನು ಬೈಪಾಸ್ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದೆ, ಅದಾದ ಎರಡೇ ತಿಂಗಳಿಗೆ
ನ್ಯುಮೋನಿಯಾ ಅಡರಿಕೊಂಡಿತು. ಇನ್ನೇನು ಶರೀರ ಸ್ವಲ್ಪ ಚೇತರಿಸಿಕೊಳ್ಳುತ್ತಿದೆ ಅಂದು ಕೊಳ್ಳುವಷ್ಟರಲ್ಲಿ ಕೋವಿಡ್​ನ ಒಮಿಕ್ರಾನ್ ರೂಪಾoತರಕ್ಕೆ ನನ್ನ ಬಲಹೀನ ಶ್ವಾಸಕೋಶಗಳು ಬಲಿಯಾದವು. ಇದೀಗ 6 ವಾರಗಳ ಹಿಂದೆ 7 ದಿನಗಳ ಆಸ್ಪತ್ರೆಯ ವಾಸದಿಂದ ಬಿಡುಗಡೆ ಹೊಂದಿ ಮನೆಗೆ ಬಂದಿದ್ದೇನೆ. ಇದು 50 ವರ್ಷಗಳ ಮಧುಮೇಹ ಮತ್ತು ರಕ್ತದೊತ್ತಡದ ಹೊರತಾಗಿಯೂ 74 ವರ್ಷದಲ್ಲೂ ದೃಢವಾಗಿ ಆರೋಗ್ಯವಾಗಿದ್ದ ನನ್ನ ಅಹಂಕಾರದ ಭಾವನೆಯನ್ನು ಸ್ವಲ್ಪ ಮಟ್ಟಿಗೆ ತಣ್ಣಗೆ ಮಾಡಿದವು. ಆದರೂ ಈ ಎರಡು ಕಾಯಿಲೆಗಳು ಎಂದಿಗೂ ನನ್ನ ಮೇಲೆ ಪರಿಣಾಮ ಬೀರಲಿಲ್ಲ. ನನ್ನ ಸಂಶೋಧನೆಯಲ್ಲಿ ಉತ್ಕೃಷ್ಟ ಸಾಧನೆಗೊಳಿಸುವ ಉತ್ಸಾಹ, ಭಾರತದಾದ್ಯಂತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಯಾಣಿಸಿ ಎಲ್ಲೆಡೆ ಹೆಸರುಗಳಿಸಿದ ಸಾಧನೆ ನನ್ನದಾಗಿತ್ತು
ನಾನು ನನ್ನ ಬದುಕು ಅಥವಾ ವೃತ್ತಿ ಜೀವನವನ್ನು ಎಂದಿಗೂ ಯೋಜಿಸಲಿಲ್ಲ. ನಾನು ಸಾಕಷ್ಟು ಬುದ್ಧಿವಂತೆ, ನಾನು ಮಾಡುತ್ತಿರುವ ಕೆಲಸ ನನ್ನ ಹೃದಯಕ್ಕೆ ಹತ್ತಿರವಾದರೆ, (ಇದು ಸಂಶೋಧನೆಯಲ್ಲಿ ಸಾಮಾನ್ಯ ) ಕಷ್ಟಪಟ್ಟು, ದಿನ ರಾತ್ರಿ, ಊಟ ನಿದ್ರೆಗಳಿಲ್ಲದೆ ಕೆಲಸ ಮಾಡಿದ್ದೇನೆ. ಇವುಗಳು ಭರಪೂರ ಫಲ ನೀಡಿವೆ. ನನ್ನ ಜೀವನದಲ್ಲಿ ನಾನು ಇಂದು ಎತ್ತರದ ಸ್ಥಳದಲ್ಲಿ ನಿಂತಿರುವ ಅತ್ಯಂತ ಅದೃಷ್ಟಶಾಲಿ.

ಈ ಯಶಸ್ಸಿನ ಪಯಣದ ಏರಿಳಿತಗಳು ಸಂತೋಷ ಮತ್ತು ಸಂಕಟಗಳು ನನ್ನಿಂದ ಮಾತ್ರವಲ್ಲದೆ ಬಹಳಷ್ಟು ಜನರಿಂದ, ನನ್ನ ಕುಟುಂಬದಿಂದ, ನನ್ನ ವೃತ್ತಿಯಿಂದ, ನನ್ನ ಸ್ನೇಹಿತರು ಮತ್ತು ಗೆಳೆಯರಿಂದ ರೂಪುಗೊಂಡವು. ಪ್ರಾಥಮಿಕ ಹಂತದಲ್ಲಿ ನನ್ನ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದ. ಸರ್ಕಾರಿ ನೌಕರನ ಮಗಳಾಗಿರುವುದರಿಂದ, ನನ್ನ ತಂದೆ ಕರ್ನಾಟಕದ ವಿವಿಧ ಜಿಲ್ಲಾ ಕೇಂದ್ರಗಳಿಗೆ ವರ್ಗಾವಣೆಗೊಳ್ಳುತಿದ್ದುದರಿಂದ ನಾನು ಆಗಾಗ್ಗೆ ವಿವಿಧ ಶಾಲೆಗಳಲ್ಲಿ ಓದಬೇಕಾಗಿತ್ತು. 1950 ಮತ್ತು 1960 ರ ದಶಕಗಳಲ್ಲಿ ಸುಮಾರು 13-14 ವರ್ಷ ವಯಸ್ಸಿನ ಹುಡುಗಿಯರಿಗೆ ಮದುವೆ ಮಾಡುವುದು ರೂಢಿಯಾಗಿತ್ತು. ಈ ದೃಷ್ಟಿಯಿಂದ ನನ್ನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಕರು ನನ್ನ ತಂದೆಯನ್ನು ಯಾವುದೇ ಕಾರಣಕ್ಕೂ ನನ್ನ ಶಿಕ್ಷಣವನ್ನು ಮೊಟಕುಗೊಳಿಸಬಾರದೆಂದು ಟಿಸಿ ಕೊಡುವ ಮೊದಲು ಹೇಳುತಿದ್ದರು. ಅಂದರೆ ಮದುವೆ ಮಾಡಿ ನನ್ನ ಓದಿಗೆ ಕಡಿವಾಣ ಹಾಕಬಾರದೆಂದು ಅವರ ಕಳಿಕಳಿ.

TV9 Kannada


Leave a Reply

Your email address will not be published.