World Diabetes Day 2022: ಮಧುಮೇಹಿಗಳ ಆರೋಗ್ಯ ವಿಮೆಗಿರುವ ಷರತ್ತುಗಳು, ಪ್ರೀಮಿಯಂ ಬಗ್ಗೆ ಇಲ್ಲಿದೆ ವಿವರ – World Diabetes Day 2022: Can blood sugar patients take health insurance? Check policy conditions, premium, other details


ಮಧುಮೇಹಿಗಳು ಆರೋಗ್ಯ ವಿಮೆ ಹೊಂದಬಹುದೇ? ಅದಕ್ಕಿರುವ ಷರತ್ತುಗಳೇನು? ಪ್ರೀಮಿಯಂ ದರ ಹೆಚ್ಚಿದೆಯೇ? ಇತ್ಯಾದಿ ಹಲವು ಪ್ರಶ್ನೆಗಳು ಜನರಲ್ಲಿ ಉದ್ಭವಿಸುವುದು ಸಹಜ. ಇವುಗಳಿಗೆ ತಜ್ಞರು ನೀಡಿರುವ ಉತ್ತರ ಇಲ್ಲಿದೆ.

World Diabetes Day 2022: ಮಧುಮೇಹಿಗಳ ಆರೋಗ್ಯ ವಿಮೆಗಿರುವ ಷರತ್ತುಗಳು, ಪ್ರೀಮಿಯಂ ಬಗ್ಗೆ ಇಲ್ಲಿದೆ ವಿವರ

ಸಾಂದರ್ಭಿಕ ಚಿತ್ರ

ನವೆಂಬರ್ 14 ಅನ್ನು ವಿಶ್ವ ಮಧುಮೇಹಿಗಳ ದಿನವನ್ನಾಗಿ (World Diabetes Day) ಆಚರಿಸಲಾಗುತ್ತಿದೆ. ಈ ದಿನ ಮಧುಮೇಹದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ (World Health Organisation) ಮಾಹಿತಿ ಪ್ರಕಾರ, ಜಗತ್ತಿನಾದ್ಯಂತ 42.2 ಕೋಟಿ ಜನ ಮಧುಮೇಹದಿಂದ ಬಳಲುತ್ತಿದ್ದು, 15 ಲಕ್ಷ ಮಂದಿ ಪ್ರತಿ ವರ್ಷ ಮಧುಮೇಹ ಸಂಬಂಧಿತ ಸಮಸ್ಯೆಗಳಿಂದಾಗಿ ಮೃತಪಡುತ್ತಿದ್ದಾರೆ. ಭಾರತದಲ್ಲಿ ಮಧುಮೇಹ ಗಣನೀಯವಾಗಿ ಹೆಚ್ಚುತ್ತಿದೆ. ದೇಶದಲ್ಲಿ 20ರಿಂದ 70 ವರ್ಷ ವಯಸ್ಸಿನ ಅಂದಾಜು ಶೇಕಡಾ 8.7ರಷ್ಟು ಮಂದಿ ಮಧುಮೇಹ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಮಧುಮೇಹ ತಡೆಗೆ ಜಾಗೃತಿ ಮೂಡಿಸಲು ಸರ್ಕಾರವೂ ಶ್ರಮಿಸುತ್ತಿದೆ. ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಆರೋಗ್ಯ ವಿಮೆಯ ವಿಚಾರಕ್ಕೆ ಬಂದಾಗ ಮಧುಮೇಹಿಗಳಿಗೆ ಸಂಬಂಧಿಸಿ ಹಲವು ಪ್ರಶ್ನೆಗಳು ಉದ್ಭವಿಸಬಹುದು. ಮಧುಮೇಹಿಗಳು ಆರೋಗ್ಯ ವಿಮೆ ಹೊಂದಬಹುದೇ? ಅದಕ್ಕಿರುವ ಷರತ್ತುಗಳೇನು? ಪ್ರೀಮಿಯಂ ದರ ಹೆಚ್ಚಿದೆಯೇ? ಇತ್ಯಾದಿ ಹಲವು ಪ್ರಶ್ನೆಗಳು ಜನರಲ್ಲಿ ಉದ್ಭವಿಸುವುದು ಸಹಜ.

ಮಧುಮೇಹಿಗಳು ಆರೋಗ್ಯ ವಿಮೆ ಹೊಂದಬಹುದೇ?

ವಿ,ಮಾ ಕ್ಷೇತ್ರದ ತಜ್ಞರು ಹೇಳುವ ಪ್ರಕಾರ, ಮಧುಮೇಹ ಹೊಂದಿರುವವರೂ ಆರೋಗ್ಯ ವಿಮೆ ಹೊಂದಬಹುದು. ಆದರೆ, ತುಸು ಹೆಚ್ಚುವರಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

ಪಾಲಿಸಿ ಮಾಡಿಸಿಕೊಂಡ ನಂತರ ರೋಗ ಪತ್ತೆಯಾದರೆ, ಆರೋಗ್ಯ ವಿಮಾ ಪಾಲಿಸಿಗಳು ಮಧುಮೇಹದಂತಹ ಜೀವನಶೈಲಿ ರೋಗಗಳನ್ನೂ ಒಳಗೊಳ್ಳುತ್ತವೆ. ಆದರೆ, ಪಾಲಿಸಿ ಮಾಡಿಕೊಳ್ಳುವ ಮೊದಲೇ ಜೀವನಶೈಲಿ ಕಾಯಿಲೆಗಳಿದ್ದರೂ ಅದರಲ್ಲಿ ಅಳವಡಿಸಿಕೊಳ್ಳಲು ಅವಕಾಶವಿದೆ. ಇಂಥ ಸಂದರ್ಭದಲ್ಲಿ ಕಾಯುವಿಕೆ ಅವಧಿ (waiting period) ಮುಗಿದ ಮೇಲೆ ಪಾಲಿಸಿ ಪ್ರಯೋಜನ ಪಡೆಯಲು ಅರ್ಹರೆಂದು ಅಥವಾ ಹೆಚ್ಚು ಮೊತ್ತದ ಪ್ರೀಮಿಯಂ ಪಡೆಯುವ ಮೂಲಕ ಸೌಲಭ್ಯ ಪಡೆಯಲು ಅರ್ಹರೆಂದು ಪರಿಗಣಿಸಲಾಗುತ್ತದೆ ಎಂದು ಎಡೆಲ್ವೀಸ್ ಜನರಲ್ ಇನ್ಶೂರೆನ್ಸ್​ನ ಮುಖ್ಯ ಉತ್ಪನ್ನ ಅಧಿಕಾರಿ ಪೂಜಾ ಯಾದವ್ ಮಾಹಿತಿ ನೀಡಿರುವುದಾಗಿ ‘ಝೀ ಬ್ಯುಸಿನೆಸ್’ ವರದಿ ಮಾಡಿದೆ.

ಮಧುಮೇಹಿಗಳಿಗೆ ಆರೋಗ್ಯ ವಿಮೆ ಯಾಕೆ ಅಗತ್ಯ?

ಮಧುಮೇಹವನ್ನು ನಿರ್ವಹಿಸುವುದು ಸಾಮಾನ್ಯವಾಗಿ ಆರ್ಥಿಕವಾಗಿ ಕಷ್ಟಕರವಾಗಿ ಪರಿಣಮಿಸಬಹುದು. ಉಳಿತಾಯದ ಮೇಲೆಯೂ ಪರಿಣಾಮ ಬೀರಬಹುದು. ಹೀಗಾಗಿ ಆರೋಗ್ಯಕ್ಕೆ ಸಂಬಂಧಿಸಿ ಮಧುಮೇಹಿಗಳು ಹೆಚ್ಚಿನ ಎಚ್ಚರ ವಹಿಸಬೇಕಾಗುತ್ತದೆ. ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾದ ನಂತರ ಬರುವ ಖರ್ಚು-ವೆಚ್ಚಗಳು, ಆಸ್ಪತ್ರೆಯ ವೆಚ್ಚಗಳು, ಚಿಕಿತ್ಸೆ, ಡಯಾಲಿಸಿಸ್, ಆ್ಯಂಬುಲೆನ್ಸ್ ಸೇರಿ ವಿವಿಧ ವೆಚ್ಚಗಳನ್ನು ನಿರ್ವಹಿಸಲು ಉಳಿತಾಯದ ಹಣ ಸಾಕಾದೇ ಹೋಗಬಹುದು. ಹೀಗಾಗಿ ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಮಧುಮೇಹಿಗಳಿಗೆ ಆರೋಗ್ಯ ವಿಮೆ ಕೈಹಿಡಿಯಬಲ್ಲದು ಎಂದು ತಜ್ಞರು ಹೇಳಿದ್ದಾರೆ.

ಮಧುಮೇಹಿಗಳು ಹೆಚ್ಚು ಪ್ರೀಮಿಯಂ ಪಾವತಿಸಬೇಕೇ?

ಯಾವುದೇ ಆರೋಗ್ಯ ವಿಮೆಯ ಪ್ರೀಮಿಯಂ ಮೊತ್ತ ಆ ಪಾಲಿಸಿಯಲ್ಲಿ ಸಿಗುವ ಪ್ರಯೋಜನಗಳ ಮೇಲೆ ಅವಲಂಬಿತವಾಗಿರುತ್ತವೆ. ಎಷ್ಟು ಮೊತ್ತದ ಪ್ರಯೋಜನ ನಾವು ಪಡೆಯುತ್ತೇವೆ? ವಿಮೆ ಮಾಡಿಸಿಕೊಳ್ಳುವವರ ಆರೋಗ್ಯ ಹಿನ್ನೆಲೆ ಹೇಗಿದೆ ಈ ಎಲ್ಲ ವಿಚಾರಗಳೂ ಗಣನೆಗೆ ಬರುತ್ತವೆ.

ಸಾಮಾನ್ಯ ಆರೋಗ್ಯವಂತ ವ್ಯಕ್ತಿಗಳಿಗೆ ಹೋಲಿಸಿದರೆ ಮಧುಮೇಹಿಗಳ ಆರೋಗ್ಯದ ಅಪಾಯ ಹೆಚ್ಚು ಎಂದು ವಿಮಾ ಕಂಪನಿಗಳು ಭಾವಿಸುತ್ತವೆ. ಹೀಗಾಗಿ ಮಧುಮೇಹಿಗಳ ಆರೋಗ್ಯ ವಿಮೆ ಪಾಲಿಸಿ ಪ್ರೀಮಿಯಂ ಶೇಕಡಾ 15ರಿಂದ 30ರ ವರೆಗೂ ಹೆಚ್ಚಿರುತ್ತವೆ ಎಂದು ತಜ್ಞರು ಹೇಳಿದ್ದಾರೆ. ಉದಾಹರಣೆಗೆ; ಆರೋಗ್ಯವಂತ ವ್ಯಕ್ತಿಯೊಬ್ಬರ ಮೂರು ಮಂದಿಯ ಕುಟುಂಬಕ್ಕೆ 10,000ದಿಂದ 12,000 ವರೆಗಿನ ಪ್ರೀಮಿಯಂನ 10 ಲಕ್ಷ ಕವರೇಜ್​ನ ಪಾಲಿಸಿ ಇದೆ ಎಂದಾದರೆ, ಮಧುಮೇಹಿ ವ್ಯಕ್ತಿಯ ಮೂರು ಮಂದಿಯ ಕುಟುಂಬಕ್ಕೆ ಪ್ರೀಮಿಯಂ ಮೊತ್ತ ಶೇಕಡಾ 10ರಿಂದ 20ರಷ್ಟು ಹೆಚ್ಚಿರಬಹುದು ಎಂದ ಅಂದಾಜಿಸಲಾಗಿದೆ.

TV9 Kannada


Leave a Reply

Your email address will not be published. Required fields are marked *