ನ್ಯೂಜಿಲೆಂಡ್​​ ಚಾಂಪಿಯನ್​ ಪಟ್ಟ ಅಲಂಕರಿಸೋದ್ರೊಂದಿಗೆ, ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಟೂರ್ನಿಗೆ ತೆರೆ ಬಿದ್ದಿದೆ. ಹವಮಾನ ವೈಪರಿತ್ಯದ ನಡುವೆ ಸುದೀರ್ಘ 6 ದಿನಗಳ ಕಾಲ ನಡೆದ ಫೈನಲ್​ ಪಂದ್ಯ, ಹಲವು ಚರ್ಚೆಗಳನ್ನೂ ಹುಟ್ಟು ಹಾಕಿದೆ. ಅದರಲ್ಲೂ ಡಿಆರ್​ಎಸ್​ ಡಿಬೇಟ್​​ ಅತಿ ಹೆಚ್ಚು ಚರ್ಚೆಯಲ್ಲಿದೆ.

ಸುಮಾರು 2 ವರ್ಷಗಳ ಕಾಲ, 9 ತಂಡಗಳ ನಡುವೆ 27 ಸರಣಿಗಳು ನಡೆದ ಬಳಿಕ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಟೂರ್ನಿ ಅಂತ್ಯ ಕಂಡಿದೆ. ಅಧಿಕೃತವಾಗಿ ಟೆಸ್ಟ್​ ಕ್ರಿಕೆಟ್​​ ಆರಂಭವಾದ 144 ವರ್ಷಗಳ ಬಳಿಕ, ವಿಶ್ವ ಟೆಸ್ಟ್​ ಕ್ರಿಕೆಟ್​​ನ ಚಾಂಪಿಯನ್​ ಯಾರು ಅನ್ನೋದು ನಿರ್ಧಾರವಾಗಿದೆ. 6 ದಿನಗಳ ಕಾಲ ಸೌತ್​ಹ್ಯಾಂಪ್ಟನ್​ನಲ್ಲಿ ನಡೆದ ಫೈನಲ್​ ಫೈಟ್​​ನಲ್ಲಿ, 8 ವಿಕೆಟ್​​​ಗಳ ಜಯ ಸಾಧಿಸಿದ ನ್ಯೂಜಿಲೆಂಡ್,​​ ಟೆಸ್ಟ್​​ ಕ್ರಿಕೆಟ್​​ನ ನೂತನ ಚಾಂಪಿಯನ್ ಆಗಿದೆ​.

ಕಿವಿಸ್​​ ಚಾಂಪಿಯನ್​ ಪಟ್ಟ ಅಲಂಕರಿಸೊದ್ರೊಂದಿಗೆ, ಸುದೀರ್ಘ 2 ವರ್ಷಗಳ ಕಾಲ ನಡೆದ ಟೂರ್ನಿಗೇನೋ ತೆರೆ ಬಿದ್ದಿದೆ. ಆದ್ರೆ ಫೈನಲ್​ ಪಂದ್ಯದಲ್ಲಿ ಹುಟ್ಟಿದ ಚರ್ಚೆಗಳು ಮಾತ್ರ ಇನ್ನೂ ನಿಂತಿಲ್ಲ. ಮಳೆಗಾಲದಲ್ಲಿ ಇಂಗ್ಲೆಂಡ್​​ನಲ್ಲಿ ಪಂದ್ಯ ಆಯೋಜಿಸಿದ್ದು ಒಂದೆಡೆಯಾದ್ರೆ, ಒಂದೇ ಪಂದ್ಯದ ಮೂಲಕ ಚಾಂಪಿಯನ್​ ಪಟ್ಟವನ್ನ ನಿರ್ಧರಿಸಬಾರದಿತ್ತು ಅನ್ನೋದು ಇನ್ನೊಂದೆಡೆ. ಇದರ ಜೊತೆಗೆ ಇದೀಗ ಡಿಆರ್​​ಎಸ್​ನಲ್ಲಿರುವ ಅಂಪೈರ್ಸ್​ ಕಾಲ್​, ಹೊಸ ಚರ್ಚೆಯ ಹುಟ್ಟಿಗೆ ಕಾರಣವಾಗಿದೆ.

ಫೈನಲ್​ ಫೈಟ್​​ ಸುಖಾಂತ್ಯದ ಬಳಿಕ DRS ಡಿಬೇಟ್​
ಅಂಪೈರ್ಸ್​​ ಕಾಲ್​ ಆಯ್ಕೆಯ ಬಗ್ಗೆ ಪರ-ವಿರೋಧ 
ಪಂದ್ಯದ ಆಯೋಜನೆ ವಿಚಾರಕ್ಕೆ ದೋಷಾರೋಪಕ್ಕೆ ಗುರಿಯಾಗಿದ್ದ ಐಸಿಸಿ, ಇದೀಗ ಅಂಪೈರ್​​ ತೀರ್ಪು ಮರುಪರಿಶೀಲನೆಯಲ್ಲಿರುವ ಅಂಪೈರ್ಸ್​ ಕಾಲ್​ ಆಯ್ಕೆಯ ಕಾರಣದಿಂದ ಮತ್ತೆ ಟೀಕೆಗಳಿಗೆ ಗುರಿಯಾಗಿದೆ. ಇದಕ್ಕೆ ಕಾರಣವಾಗಿದ್ದು, ಪಂದ್ಯದ ತಿರುವಿಗೆ ಕಾರಣವಾದ ಈ ಘಟನೆ.

ಪಂದ್ಯದ 5ನೇ ದಿನದಾಟದಲ್ಲಿ ಶಮಿ ಎಸೆದ 84ನೇ ಓವರ್​​ನ 4ನೇ ಎಸೆತ, ನೇರವಾಗಿ ಕೇನ್​ ವಿಲಿಯಮ್​ಸನ್​ ಪ್ಯಾಡ್​​ಗೆ ಅಪ್ಪಳಿಸಿತ್ತು. ಟೀಮ್​ ಇಂಡಿಯಾ ಎಲ್​ಬಿಗೆ ಮಾಡಿದ ಮನವಿಯನ್ನ, ಆನ್​ಫೀಲ್ಡ್​​ ಅಂಪೈರ್​​ ತಿರಸ್ಕರಿಸಿದ್ರು. ಈ ನಿರ್ಧಾರವನ್ನ ಪ್ರಶ್ನಿಸಿ ಟೀಮ್​ ಇಂಡಿಯಾ ಮೇಲ್ಮನವಿ ಸಲ್ಲಿಸ್ತು. ಆದ್ರೆ ತೀರ್ಪು ಮರುಪರಿಶೀಲನೆಯಲ್ಲಿ ಬಾಲ್​ ಆಫ್​ ಸ್ಟಂಪ್​ಗೆ ಬಡಿದ ಕಾರಣದಿಂದ, ಅಂಪೈರ್​ ಕಾಲ್​ ಎಂದು ಪರಿಗಣಿಸಿ ನಾಟ್​ಔಟ್​ ನೀಡಲಾಯ್ತು.

ಇಂತದ್ದೇ ಎಸೆತಕ್ಕೆ ಬಲಿಯಾದ್ರು ರೋಹಿತ್​
ಕೇನ್​ ವಿಲಿಯಮ್​ಸನ್​ ಅಂಪೈರ್​ ವರದಾನದಿಂದ ಬಚಾವ್​ ಆದ್ರೆ, 2ನೇ ಇನ್ನಿಂಗ್ಸ್​ನಲ್ಲಿ ರೋಹಿತ್​ ಶರ್ಮಾ ಔಟ್​ ಆದ್ರು. 2ನೇ ಇನ್ನಿಂಗ್ಸ್​ನಲ್ಲಿ ಟೀಮ್​ ಇಂಡಿಯಾ ಪರ ಬ್ಯಾಟ್​ ಬೀಸ್ತಾ ಇದ್ದ ರೋಹಿತ್, ಟಿಮ್​ ಸೌಥಿ ಎಸೆದ ಸಿಮಿಲರ್​ ಎಸೆತಕ್ಕೆ ಬಲಿಯಾದ್ರು. ಆದ್ರೆ ಆನ್​ಫೀಲ್ಡ್​​ ಅಂಪೈರ್​​ ಔಟ್​ ಎಂದು ತೀರ್ಪು ನೀಡಿದ್ರು. ರೋಹಿತ್​ ಇದನ್ನ ಮರುಪರಿಶೀಲನೆ ಮಾಡಲಿಲ್ಲ. ಯಾಕಂದ್ರೆ ಅಂಪೈರ್​​ ಕಾಲ್​ ನಿರ್ಣಾಯಕವಾಗಲಿದೆ ಅನ್ನೋದು ರೋಹಿತ್​​​ಗೆ ತಿಳಿದಿತ್ತು. ಬಳಿಕ ತೋರಿಸಿದ ರೀಪ್ಲೇಯಲ್ಲೂ ಅದು ನಿಜವಾಯ್ತು.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ವಿಲಿಯಮ್​ಸನ್​ ನಾಟ್​​ ಔಟ್​ ಆದ್ರು, ರೋಹಿತ್​ ಔಟ್​​ ಆದ್ರು ಅನ್ನೋ ಕಾರಣಕ್ಕೆ ಅಂಪೈರ್​ ಕಾಲ್​ ಚರ್ಚೆಗೆ ಬಂದಿಲ್ಲ. ಈ ಹಿಂದೆಯೂ ಹಲ ಮಹತ್ವದ ಪಂದ್ಯಗಳಲ್ಲಿ ಅಂಪೈರ್​​ ಕಾಲ್​ನಿಂದಾಗಿ, ಪ್ರಮುಖ ವಿಕೆಟ್​ಗಳು ಉರುಳಿವೆ. ಔಟ್​ ಮಾತ್ರವಲ್ಲ, ಪಂದ್ಯದ ಗತಿಯೇ ಬದಲಾಗಿದೆ. ಏಕದಿನ ವಿಶ್ವಕಪ್​ ಸೆಮಿಫೈನಲ್​ನಲ್ಲಿ ಕೊಹ್ಲಿ ಔಟಾಗಿದ್ದು ಕೂಡ ಹೀಗೇ.

ಹೀಗಾಗಿಯೇ ಟೀಮ್​ ಇಂಡಿಯಾ ನಾಯಕ ಇತ್ತೀಚಿಗೆ ಡಿಆರ್​ಎಸ್​​ ಹಲವು ಗೊಂದಲಕ್ಕೆ ಕಾರಣವಾಗಿದೆ ಎಂದು ಬಹಿರಂಗವಾಗಿಯೇ ಹೇಳಿದ್ರು.

‘ನನ್ನ ಪ್ರಕಾರ, ಅಂಪೈರ್ಸ್​​ ಕಾಲ್​ ಸದ್ಯದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ನೀವು ಒಬ್ಬ ಬ್ಯಾಟ್ಸ್​ಮನ್​ ಆಗಿ ಬೋಲ್ಡ್​ ಆದ್ರೆ, 50%ಗಿಂತ ಹೆಚ್ಚು ಪ್ರಮಾಣದಲ್ಲಿ ಬಾಲ್​ ಸ್ಟಂಪ್​ಗೆ ತಾಗಿದರೇ ಮಾತ್ರ ಔಟ್​ ಎಂದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಯಾವಾಗ ಬಾಲ್​ ವಿಕೆಟ್​​ಗೆ ತಾಗಿದ್ಯೂ ಆಗ ಬೆಲ್ಸ್​ ಬಿದ್ದಿವೆ ಎಂದರ್ಥ. ಕ್ರಿಕೆಟ್​ನ ಸಾಮಾನ್ಯ ಜ್ಞಾನದ ಪ್ರಕಾರ, ಈ ಬಗ್ಗೆ ಚರ್ಚೆ ನಡೆಯಬೇಕು ಎಂದೆನ್ನಿಸಿಲ್ಲ. ಬಾಲ್​ ಸ್ಟಂಪ್​ಗೆ ಬಡಿದಿದ್ರೆ ಅದು ಔಟೇ’

ವಿರಾಟ್​​ ಕೊಹ್ಲಿ, ಟೀಂ ಇಂಡಿಯಾ ನಾಯಕ

ಅಂಪೈರ್ಸ್​ ಕಾಲ್​ ಆಯ್ಕೆಗೆ ದಿಗ್ಗಜರ ಆಕ್ಷೇಪ
ಕೊಹ್ಲಿ ಮಾತ್ರವಲ್ಲ.. ಹಲವು ವಿಶ್ಲೇಷಕರು, ಮಾಜಿ ಕ್ರಿಕೆಟಿಗರ ಅಭಿಪ್ರಾಯವೂ ಇದೇ ಆಗಿದೆ. ಕಳೆದ ಆಸ್ಟ್ರೇಲಿಯಾ-ಭಾರತದ ನಡುವಿನ ಬಾರ್ಡರ್​-ಗವಾಸ್ಕರ್​ ಸರಣಿ ವೇಳೆ ದಿಗ್ಗಜ ಸಚಿನ್​ ತೆಂಡೂಲ್ಕರ್​ ಕೂಡ DRS ನಿಯಮವನ್ನ ಪರಿಷ್ಕರಿಸಬೇಕೆಂಬ ಹೇಳಿಕೆ ನೀಡಿದ್ರು.

‘ನನಗಂತೂ ಡಿಆರ್​​ಎಸ್​​ ನಿಯಮ ಇನ್ನೂ ಮನವರಿಕೆಯಾಗಿಲ್ಲ. ಒಂದು ವಿಷಯ ಅರ್ಥ ಮಾಡಿಕೊಳ್ಳೋಣ. ಆಟಗಾರರು 3ನೇ ಅಂಪೈರ್​ ಮೊರೆ ಹೋಗೋದು ಯಾಕೆ..? ಅಂಪೈರ್​​ ನೀಡಿದ ತಿರ್ಮಾನ ಒಪ್ಪಿತವಾಗಿಲ್ಲ ಅನ್ನೋ ಕಾರಣಕ್ಕೆ. ಒಮ್ಮೆ ನೀವು 3ನೇ ಅಂಪೈರ್​ ಮೊರೆ ಹೋದ ಬಳಿಕ ಆನ್​ಫೀಲ್ಡ್​ ಅಂಪೈರ್​ ನೀಡಿದ ತೀರ್ಪು ಗಣನೆಗೆ ಬರಬಾರದು. ಬಾಲ್​ 10% ಅಥವಾ 20% ಅಥವಾ 70%, ಯಾವುದೇ ಪ್ರಮಾಣದಲ್ಲಿ ತಾಗಿದ್ರು ಅದು ಔಟೇ. ಯಾಕಂದ್ರೆ ನೀವು ಬೌಲ್ಡ್​ ಆದಾಗ ಈ ಬಗ್ಗೆ ಯಾರೂ ಮಾತನಾಡುವುದಿಲ್ಲ’

ಸಚಿನ್​ ಮಾತ್ರವಲ್ಲ ಆಸಿಸ್​​ ದಿಗ್ಗಜ ಶೇನ್​ ವಾರ್ನ್​​​ ಕೂಡ ಇಂತದ್ದೇ ಮಾತುಗಳನ್ನಾಡಿದ್ರು. ನನ್ನ ಪ್ರಕಾರ ಆಟದ ಯಾವುದೇ ಅಭಿವೃದ್ಧಿಗಳು ನಮಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡಬೇಕು. ಬಾಲ್​ ಲೈನ್​ನಲ್ಲಿದ್ದು ಯಾವುದೇ ಪ್ರಮಾಣದಲ್ಲಿ ಅದು ವಿಕೆಟ್​ಗೆ ತಾಗಿದ್ರೂ ಅದು ಔಟ್​​ ಎಂದು ಹೇಳಿದ್ರು. ನಿಯಮದ ಬದಲಾವಣೆಗೂ ಬಲವಾಗಿ ಒತ್ತಾಯಿಸಿದ್ರು.

ಐಸಿಸಿ ಈ ನಿಯಮವನ್ನ ನೂತನವಾಗಿ ಪರಿಚಯಿಸಿದಾಗಲೇ ಇದಕ್ಕೆ ವಿರೋಧಗಳು ಕೇಳಿ ಬಂದಿದ್ವು. ಕಳೆದ ವರ್ಷವಂತೂ ಇದರ ಬದಲಾವಣೆಗೆ ದಿಗ್ಗಜ ಆಟಗಾರರೇ ಒತ್ತಾಯಿಸಿದ್ರು. ಐಸಿಸಿ ಸಭೆಯಲ್ಲಿ ಈ ವಿಚಾರ ಚರ್ಚೆಗೂ ಬಂದಿತ್ತು. ಆದ್ರೂ ಏಪ್ರಿಲ್​ನಲ್ಲಿ ಐಸಿಸಿ ಅಧಿಕೃತವಾಗಿಯೇ ಅಂಪೈರ್ಸ್​ ಕಾಲ್​ ಮುಂದುವರಿಸುವುದಾಗಿ ಹೇಳಿಕೆ ನೀಡಿದೆ. ಇದೀಗ ಮತ್ತೇ ಅಂಪೈರ್​​ ಕಾಲ್​ ಚರ್ಚೆ ಆರಂಭವಾಗಿರೋದ್ರಿಂದ ಮುಂದಾದ್ರೂ ಐಸಿಸಿ ತನ್ನ ನಿಯಮದಲ್ಲಿ ಬದಲಾವಣೆ ತರುತ್ತಾ..? ಕಾದು ನೋಡಬೇಕಿದೆ.

The post WTC ಅಂತ್ಯದ ಬಳಿಕ DRS ಡಿಬೇಟ್​​ -ಮತ್ತೆ ಮುನ್ನೆಲೆಗೆ ಬಂದ ಅಂಪೈರ್ಸ್​ ಕಾಲ್​ ಚರ್ಚೆ appeared first on News First Kannada.

Source: newsfirstlive.com

Source link