ವಿಶ್ವ ಟೆಸ್ಟ್​ ಚಾಂಪಿಯನ್​​​​ಶಿಪ್​​​ ಫೈನಲ್​​ನ ಹಗ್ಗ-ಜಗ್ಗಾಟದಲ್ಲಿ ಗೆದ್ದು, ನ್ಯೂಜಿಲೆಂಡ್​​​​​​​ ಐತಿಹಾಸಿಕ ಸಾಧನೆ ಮಾಡಿದೆ. ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ ಟೀಮ್‌ ಇಂಡಿಯಾ, ರನ್ನರ್‌ಅಪ್‌ಗೆ ತೃಪ್ತಿಪಟ್ಟುಕೊಂಡಿದೆ. ಆದ್ರೆ ಫೈನಲ್​ ಮುಗಿದು ಎರಡು ದಿನಗಳಾದ್ರು, ಟೀಮ್ ಇಂಡಿಯಾ ಸೋಲಿಗೆ ಮತ್ತು ಕ್ಯಾಪ್ಟನ್​ ವಿರಾಟ್​ ಕೊಹ್ಲಿ ವಿರುದ್ಧ ಟೀಕೆ ಮಾತ್ರ ನಿಂತಿಲ್ಲ. ಅದರಲ್ಲೂ ಫೈನಲ್​ ಪಂದ್ಯಕ್ಕೆ ಆಯ್ಕೆ ಮಾಡಲಾದ ಟೀಮ್​ ಇಂಡಿಯಾ ಬೌಲಿಂಗ್​ ಡಿಪಾರ್ಟ್​​ಮೆಂಟ್​​​​​ ಬಗ್ಗೆ ಸಾಕಷ್ಟು ಚರ್ಚೆ ನಡೀತಿದೆ.

ಟೀಮ್​ ಇಂಡಿಯಾ ಬೌಲಿಂಗ್​ ವಿಭಾಗ​​​​ ಸೂಕ್ತವಾಗಿರಲಿಲ್ಲ. ಮಳೆ ವಾತಾವರಣದಲ್ಲಿ ಇಬ್ಬರು ಸ್ಪಿನ್ನರ್​ಗಳನ್ನ ಕಣಕ್ಕಿಳಿಸಿದ್ದು, ದಿಗ್ಗಜ ಕ್ರಿಕೆಟಿಗರ ಮತ್ತು ಕ್ರಿಕೆಟ್​ ಎಕ್ಸ್​ಪರ್ಟ್​ಗಳ ಟೀಕೆಗೆ ಕಾರಣವಾಗಿದೆ. ಟಾಸ್​​​ಗೂ ಮೊದಲು ಸ್ಪೆಷಲಿಸ್ಟ್ ಪೇಸರನ್ನ ಬಳಸಿಕೊಳ್ಳುವಂತೆ ಸಲಹೆಗಳು ಕೇಳಿ ಬಂದಿದ್ದವು. ಇಷ್ಟಾದರೂ ಸ್ಪಿನ್ನರ್​ಗಳಿಗೆ ಮಣೆ ಹಾಕಿದ್ದು, ಟೀಮ್ ಇಂಡಿಯಾ ಸೋಲಿಗೆ ಕಾರಣವಾಗಿದೆ. ಹೀಗಂತ ಕ್ಯಾಪ್ಟನ್​​ ಮೇಲೆ ಆಕ್ರೋಶದ ಬೆಂಕಿ ಚೆಂಡುಗಳನ್ನ ಎಸೆಯಲಾಗ್ತಿದೆ.

ಪಿಚ್​​​ಗೆ ತಕ್ಕಂತೆ ವೇಗಿಗಳನ್ನ ವಿರಾಟ್​​ ಕೊಹ್ಲಿ ಕಣಕ್ಕಿಳಿಸಬೇಕಿತ್ತು. ಆದರೆ ಹಾಗೆ ಮಾಡದ ಹಿನ್ನೆಲೆ, ಚಾಂಪಿಯನ್ ​ಶಿಪ್​ ಫೈನಲ್​​ನಲ್ಲಿ ಭಾರತ ಮುಖಭಂಗ ಅನುಭವಿಸುವಂತಾಯ್ತು. ಪಿಚ್​​ ಬಗ್ಗೆ ಅರಿತು ಪಕ್ಕಾ ಗೇಮ್​​​ ಪ್ಲಾನ್​ನೊಂದಿಗೆ ತಂಡವನ್ನ ಕಣಕ್ಕಿಳಿಸಿದ ಕೇನ್​ ವಿಲಿಯಮ್ಸನ್​,​​ ಚಾಣಾಕ್ಷ ನಡೆಗೆ ಗೆಲುವು ದಕ್ಕಿದೆ. ಆದರೆ ಕೊಹ್ಲಿ ಯಾಕೆ ಈ ನಡೆಯನ್ನ ಅನುಕರಿಸಿಲ್ಲ? ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಕಿವೀಸ್​​ ಐವರು ವೇಗಿಗಳನ್ನ ಕಣಕ್ಕಿಳಿಸಿದೆ. ಆದ್ರು ನಾಯಕ ವಿರಾಟ್​ ಕೊಹ್ಲಿ, ಬೌಲಿಂಗ್​ ವಿಭಾಗವನ್ನ ಸಮರ್ಥನೆ ಮಾಡಿಕೊಂಡಿದ್ದಾರೆ.

ಪ್ಲೇಯಿಂಗ್​ ಇಲೆವೆನ್​ ಸಮರ್ಥಿಸಿಕೊಂಡ ವಿರಾಟ್​ ಕೊಹ್ಲಿ!
ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ ಸೋಲಿನ ಬಳಿಕವೂ ಟೀಮ್ ಇಂಡಿಯಾ ಬೌಲಿಂಗ್ ಕಾಂಬಿನೇಷನ್​ ಅನ್ನ, ನಾಯಕ ವಿರಾಟ್ ಕೊಹ್ಲಿ ಸಮರ್ಥಿಸಿಕೊಂಡಿದ್ದಾರೆ. ಸಮರ್ಥ ತಂಡವನ್ನ ಕಣಕ್ಕಿಳಿಸಬೇಕಂದ್ರೆ, ಪೇಸ್​ ಆಲ್​ರೌಂಡರ್​ ಅಗತ್ಯತೆ ನಮಗಿತ್ತು. ಆದ್ರೆ ಆಯ್ಕೆ ಇರಲಿಲ್ಲ. ಹೀಗಾಗಿ ನಮ್ಮ ಬೆಸ್ಟ್​ ಇಲೆವೆನ್​ ಜೊತೆ ಕಣಕ್ಕಿಳಿದೆವು ಅನ್ನೋದು ಕೊಹ್ಲಿ ಮಾತಾಗಿದೆ.

‘ತಂಡದ ಸಮತೋಲನಕ್ಕೆ ಫಾಸ್ಟ್​ ಬೌಲಿಂಗ್​ ಆಲ್​ರೌಂಡರ್​ ಅಗತ್ಯತೆ ಇತ್ತು. ನಾವು ಆಡಿದ ಕಾಂಬಿನೇಷನ್​ನಲ್ಲಿ ವಿಶ್ವದ ಬೇರೆ-ಬೇರೆ ಭಾಗಗಳಲ್ಲಿ ವಿವಿಧ ಕಂಡೀಷನ್​ನಲ್ಲಿ ಯಶಸ್ಸನ್ನ ಕಂಡಿದ್ದೇವೆ. ಹೀಗಾಗಿ ನಾವು ಇದು ಉತ್ತಮ 11ರ ಬಳಗ ಎಂಬ ನಿರ್ಧಾರಕ್ಕೆ ಬಂದು ಕಣಕ್ಕಿಳಿದೆವು. ಇದು ಬ್ಯಾಟಿಂಗ್​ಗೂ ಸಹಾಯಕವಾಗಿತ್ತು. ಹಾಗಾಗಿ ಎಲ್ಲಾ ವಿಭಾಗಗಳನ್ನೂ ಒಳಗೊಂಡು ಆಯ್ಕೆ ಮಾಡಿದೆವು. ಪಂದ್ಯದ ಸಮಯ ಇನ್ನೂ ಹೆಚ್ಚಿದ್ದು, ಪಿಚ್​ ಇನ್ನೂ ಹೆಚ್ಚು ಸಹಾಯಕವಾಗಿದ್ರೆ, ಸ್ಪಿನ್ನರ್​​ಗಳು ಪಂದ್ಯದಲ್ಲಿ ಕೀ ರೋಲ್​ ಪ್ಲೇ ಮಾಡ್ತಿದ್ರು’
-ವಿರಾಟ್​ ಕೊಹ್ಲಿ, ಟೀಂ ಇಂಡಿಯಾ ನಾಯಕ

ಭುವಿ, ಹಾರ್ದಿಕ್​​, ಶಾರ್ದೂಲ್​ಗೆ ಚಾನ್ಸ್ ನೀಡಬೇಕಿತ್ತು
ಫೈನಲ್​ ಪಂದ್ಯದಲ್ಲಿ ಇಶಾಂತ್​ ಶರ್ಮಾ ಮತ್ತು ಮೊಹಮ್ಮದ್​ ಶಮಿ ಡೀಸೆಂಟ್ ಪರ್ಫಾಮೆನ್ಸ್ ನೀಡಿದ್ರು. ಆದ್ರೆ ಜಸ್​ಪ್ರಿತ್ ಬುಮ್ರಾ​​ ಮಾತ್ರ ಕಳಪೆ ಸ್ಪೆಲ್​ ಮಾಡಿದ್ರು. ಬುಮ್ರಾ ಕಳೆದೆರಡು ವರ್ಷಗಳಿಂದ ಸತತ ವೈಫಲ್ಯ ಅನುಭವಿಸ್ತಿದ್ದಾರೆ. ಆದರೂ ಬುಮ್ರಾಗೆ ಚಾನ್ಸ್​ ನೀಡಿದ್ದೇಕೆ ಅಂತಿದ್ದಾರೆ ಮಾಜಿ ಕ್ರಿಕೆಟಿಗರು. ಬೌಲಿಂಗ್​ ಆಲ್​​ರೌಂಡರ್​​ನಲ್ಲಿ ಶಾರ್ದೂಲ್​ ಠಾಕೂರ್​​ಗೆ ಅವಕಾಶ ಕೊಡಬೇಕಿತ್ತು. ಆಸಿಸ್​​ ಪ್ರವಾಸದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್​​ನಲ್ಲಿ ಉತ್ತಮ ಕೊಡುಗೆಯನ್ನೇ ನೀಡಿದ್ದ ಶಾರ್ದೂಲ್​​, ಬೌಲಿಂಗ್​ ಆಲ್​ರೌಂಡರ್​​ ಸ್ಥಾನಕ್ಕೆ ಅರ್ಹರು. ಆದರೆ ಟೀಮ್​ ಮ್ಯಾನೇಜ್​ಮೆಂಟ್​ ತೆಗೆದುಕೊಂಡ ತಪ್ಪು ನಿರ್ಧಾರದಿಂದ ತಂಡ ಸೋತಿದೆ ಅಂತ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ.

ಶಾರ್ದೂಲ್​ ಜೊತೆಗೆ ಭುವನೇಶ್ವರ್​ ಕುಮಾರ್​ ಮತ್ತು ಹಾರ್ದಿಕ್​ ಪಾಂಡ್ಯರನ್ನ ಕೂಡ ಆಯ್ಕೆ ಮಾಡಬೇಕಿತ್ತು. ಇಂಗ್ಲೆಂಡ್​ ಪಿಚ್​​​ಗಳಲ್ಲಿ ಚೆಂಡು ಹೆಚ್ಚು ಸ್ವಿಂಗ್​ ಆಗುತ್ತೆ ಅನ್ನೋದು ಗೊತ್ತಿದ್ರೂ, ಭುವನೇಶ್ವರ್​​ಗೆ ಏಕೆ ಅವಕಾಶ ನೀಡಿಲ್ಲ ಅನ್ನೋದು ಈಗಲೂ ಉತ್ತರ ಸಿಗದ ಪ್ರಶ್ನೆಯಾಗಿದೆ. ಸ್ವಿಂಗ್​ ಮಾಸ್ಟರ್​ ಭುವಿ ಕಿವೀಸ್​ ವಿರುದ್ಧ ಆಡಿದ್ರೆ ಪಂದ್ಯದ ಗತಿಯೇ ಬದಲಾಗ್ತಿತ್ತು ಅಂತಿದ್ದಾರೆ ದಿಗ್ಗಜರು. ಇನ್ನು ಬೌಲಿಂಗ್​ ಆಲ್​​ರೌಂಡರ್​​ ಸೆಲೆಕ್ಷನ್​ನಲ್ಲಿ ಹಾರ್ದಿಕ್​ ಪಾಂಡ್ಯರನ್ನ ಪರಿಗಣಿಸಬೇಕಿತ್ತು ಎಂದೂ ಕೂಡ ಹೇಳಿದ್ದಾರೆ.

ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ ಪಂದ್ಯದ ಆರಂಭಕ್ಕೂ ಮುನ್ನ ಮಳೆ ವಕ್ಕರಿಸಿತ್ತು. ಆದರೆ ಪಂದ್ಯ ಶುರುವಾಗೋಕೂ ಒಂದು ದಿನ ಮುಂಚೆ ತಂಡವನ್ನ ಭಾರತ ಪ್ರಕಟಿಸಿತ್ತು. ಹೀಗಾಗಿ ಪಿಚ್​​ನಲ್ಲೂ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದನ್ನು ನೋಡಿಕೊಂಡು, ತಂಡದಲ್ಲಿ ಬದಲಾವಣೆ ತರುವ ಅವಕಾಶ ಇದ್ದರೂ ಅದನ್ನ ಮಾಡದೆ ಮತ್ತೊಂದು ಎಡವಟ್ಟು ಮಾಡ್ತು. ಒಟ್ನಲ್ಲಿ.. ಟೀಮ್​ ಮ್ಯಾನೇಜ್​ಮೆಂಟ್​ ಎಡವಟ್ಟುಗಳಿಂದ ಇಂದು ಭಾರೀ ಬೆಲೆ ತರುವಂತಾಗಿದೆ. ಮುಂದಾದರೂ ಇಂತಹ ತಪ್ಪುಗಳು ಮರುಕಳಿಸದರಲಿ ಅನ್ನೋದು ಕ್ರಿಕೆಟ್​ ಪಂಡಿತರ ಅಭಿಪ್ರಾಯ.

The post WTC ಫೈನಲ್ಸ್​​ ಬೌಲಿಂಗ್​​ ಆಯ್ಕೆ ವಿಚಾರದಲ್ಲಿ ಎಡವಿದ್ದೆಲ್ಲಿ ಕೊಹ್ಲಿ? appeared first on News First Kannada.

Source: newsfirstlive.com

Source link