ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಿಂದ ಪಾಠ ಕಲಿತಿರುವ ಟೀಮ್ ​ಇಂಡಿಯಾ, ಇಂಗ್ಲೆಂಡ್​ ವಿರುದ್ಧದ ಸರಣಿಗೆ ಈಗಲೇ ಸಿದ್ಧತೆ ನಡೆಸಿದೆ. ಸರಣಿ ಆರಂಭಕ್ಕೆ ಒಂದು ತಿಂಗಳಿಗೂ ಹೆಚ್ಚು ಕಾಲದ ಅಂತರವಿದ್ರೂ, ಸೋಲು ಕಲಿಸಿರುವ ಪಾಠ ಕೊಹ್ಲಿ ಪಡೆಯ ನಿದ್ದೆಗೆಡಿಸಿದೆ. ಆಂಗ್ಲರ ವಿರುದ್ಧದ ಸರಣಿಗೆ ಟೀಮ್​ ಇಂಡಿಯಾ ತಯಾರಿ ಹೇಗಿದೆ..? ಇಲ್ಲಿದೆ ನೋಡಿ ಡಿಟೇಲ್ಸ್​​

ಕಳೆದ ಕೆಲವು ದಿನಗಳಿಂದ ಕ್ರಿಕೆಟ್​​ ಲೋಕದಲ್ಲಿ ಟ್ರೆಂಡ್​​ ಸೃಷ್ಠಿಸಿದ್ದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ತೆರೆಬಿದ್ದಿದೆ. ಫೈನಲ್​ ಪಂದ್ಯವನ್ನ ಗೆದ್ದ ನ್ಯೂಜಿಲೆಂಡ್​​ ಪಡೆ ಚೊಚ್ಚಲ ಚಾಂಪಿಯನ್​ ಆಗಿ ಹೊರ ಹೊಮ್ಮಿದ್ರೆ, ಆತ್ಮವಿಶ್ವಾಸದಲ್ಲಿ ಕಣಕ್ಕಿಳಿಕ್ಕಿದಿದ್ದ ಟೀಮ್​ ಇಂಡಿಯಾ ಸೋಲುಂಡಿದೆ.

ಟೀಮ್​ ಇಂಡಿಯಾ ಮಹತ್ವದ ಪಂದ್ಯದಲ್ಲಿ ಮುಗ್ಗರಿಸಿದ ಬೆನ್ನಲ್ಲೇ, ಸೋಲಿಗೆ ಕಾರಣ ಏನು ಎಂಬ ಹುಡುಕಾಟ ಜೋರಾಗಿದೆ. ಅಸಮರ್ಥ ಪ್ಲೇಯಿಂಗ್​ ಇಲೆವೆನ್​ ಆಯ್ಕೆ, ಅನುಭವಿ ಆಟಗಾರರ ವೈಫಲ್ಯ, ಆಟಗಾರರಲ್ಲಿಲ್ಲದ ಹೋರಾಟದ ಮನೋಭಾವ ಹೀಗೆ ಹಲವು ಕಾರಣಗಳನ್ನ ವಿಶ್ಲೇಷಕರು ಪಟ್ಟಿ ಮಾಡ್ತಿದ್ದಾರೆ. ಆದ್ರೆ ನಿಜಕ್ಕೂ ಸೋಲಿಗೆ ಕಾರಣವಾಗಿದ್ದು ಅತಿಯಾದ ಆತ್ಮವಿಶ್ವಾಸ ಹಾಗೂ ಅಭ್ಯಾಸದ ಕೊರತೆ.

ಫೈನಲ್​ ಪಂದ್ಯದಲ್ಲಿ ಕಾಡಿತು ಅಭ್ಯಾಸ ಕೊರತೆ
ಸೋಲಿಗೆ ಕಾರಣವಾಯ್ತಾ ಅತಿಯಾದ ಆತ್ಮವಿಶ್ವಾಸ..?
ಅಭ್ಯಾಸದ ಕೊರತೆ ನಮಗೆ ಕಾಡದು. ಇದು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗಾಗಿ ಪ್ರಯಾಣ ಬೆಳೆಸುವ ಮುನ್ನ ವಿರಾಟ್​​ ಕೊಹ್ಲಿ ಹೇಳಿದ ಮಾತು. ಜೂನ್​ 2ರಂದು ನಾಯಕ ವಿರಾಟ್​ ಕೊಹ್ಲಿ ಹಾಗೂ ರವಿ ಶಾಸ್ತ್ರಿ ಜಂಟಿಯಾಗಿ ನಡೆಸಿದ ಪ್ರೆಸ್​​ಮೀಟ್​​ನಲ್ಲಿ ಕೊಹ್ಲಿ ಆಡಿದ ಆತ್ಮ ವಿಶ್ವಾಸದ ಮಾತುಗಳಿವು.

‘ಈ ಹಿಂದೆ ಕೇವಲ 3 ದಿನಗಳ ಮುಂಚೆಯೂ ತೆರಳಿದ್ದೆವು. ಆಗ ವೇಳಾಪಟ್ಟಿಯೂ ಸರಿ ಇರಲಿಲ್ಲ. ಆಗ ಉತ್ತಮ ಪ್ರದರ್ಶನ ನೀಡಿದ್ದೆವು. ಎಲ್ಲವೂ ನಮ್ಮ ಗಮನದಲ್ಲಿದೆ. ಈ ಸಂದರ್ಭವನ್ನ ಗಮನಿಸಿದರೆ, ನಾವು ಇಂಗ್ಲೆಂಡ್​ನಲ್ಲಿ ಆಡುತ್ತಿರೋದು ಇದೇ ಮೊದಲಲ್ಲ. ನಮಗೆಲ್ಲರಿಗೂ ಅಲ್ಲಿನ ಆಟದ ಕಂಡೀಷನ್​ಗಳ ಬಗ್ಗೆ ಅರಿವಿದೆ. ನಿಮಗೆ ಅದರ ಅರಿವಿದ್ದೂ ಉತ್ತಮ ಯೋಜನೆಯೊಂದಿಗೆ ಕಣಕ್ಕಿಳಿಯದಿದ್ದರೆ ಕಷ್ಟ. ನಮ್ಮಲ್ಲಿ ಹಸಿವು ಹಾಗೂ ಫೈನಲ್​ ಪಂದ್ಯವನ್ನಾಡುವ ಛಲವಿದೆ. ನಮಗೆ ಯಾವುದೇ ಸಮಸ್ಯೆಗಳಿಲ್ಲ.. ಫೈನಲ್​ಗೆ ಮುನ್ನ ಕೇವಲ 4 ಅಭ್ಯಾಸದ ಅವಧಿಗಳಿರೋದು ಕೂಡ. ನಾವೆಲ್ಲರೂ ಸಿಕ್ಕ ಅವಕಾಶವನ್ನ ಹೆಚ್ಚು ಬಳಸಿಕೊಳ್ಳಲಿದ್ದೇವೆ. ಈ ಹಿಂದೆಯೂ ನಾವು ಇಂಗ್ಲೆಂಡ್​ನಲ್ಲಿ ಆಡಿದ್ದೇವೆ. ಅದು ಟೀಮ್​ಇಂಡಿಯಾಗಿರಬಹುದು ಅಥವಾ ಇಂಡಿಯಾ ಎ ಪರ ಇರಬಹುದು’
-ವಿರಾಟ್​ ಕೊಹ್ಲಿ, ಟೀಂ ಇಂಡಿಯಾ ನಾಯಕ

ಅಂದು ಅಭ್ಯಾಸದ ಕೊರತೆ ಕಾಡದು ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದ್ದ ವಿರಾಟ್​ ಕೊಹ್ಲಿ, ಚಾಂಪಿಯನ್​ಶಿಪ್​ ಸೋಲಿನ ಬಳಿಕ ಅಭ್ಯಾಸ ಪಂದ್ಯಗಳ ಬಗ್ಗೆ ಮಾತನಾಡಿದ್ದಾರೆ. ಮುಂಬರುವ ಇಂಗ್ಲೆಂಡ್​ ವಿರುದ್ಧದ ಸರಣಿಗೂ ಮುನ್ನ ಫಸ್ಟ್​ ಕ್ಲಾಸ್​ ಪಂದ್ಯಗಳನ್ನಾಡುವತ್ತ ಒಲವು ತೋರಿದ್ದಾರೆ.

ಫಸ್ಟ್​​ ಕ್ಲಾಸ್​ ಪಂದ್ಯಗಳ ಆಯೋಜನೆಗೆ ಬಿಸಿಸಿಐ ಸಿದ್ಧತೆ
ಸರಿಯಾದ ಅಭ್ಯಾಸ ಪಂದ್ಯಗಳಿಲ್ಲದೆ ಕಣಕ್ಕಿಳಿದ ಟೀಮ್​ಇಂಡಿಯಾ ಫೈನಲ್​ ಪಂದ್ಯದಲ್ಲಿ ಕಿವಿಸ್​ ಪಡೆಯ ಸಂಘಟಿತ ಹೋರಾಟದ ಮುಂದೆ ಮಂಕಾಯ್ತು. ಅತ್ತ ಫೈನಲ್​ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್​​ ವಿರುದ್ಧ 2 ಟೆಸ್ಟ್​ ಪಂದ್ಯಗಳನ್ನಾಡಿದ್ದ ನ್ಯೂಜಿಲೆಂಡ್​​ ಪಡೆ ಚಾಂಪಿಯನ್​ ಪಟ್ಟಕ್ಕೇರಿತು. ಹೀಗಾಗಿಯೇ ಇದೀಗ ಟೀಮ್ ​ಇಂಡಿಯಾ ಅಭ್ಯಾಸ ಪಂದ್ಯದ ಕಡೆ ಒಲವು ತೋರಿಸಿದೆ. ಆದ್ರೆ, ಅದಕ್ಕಿನ್ನೂ ಸಮ್ಮತಿ ಸಿಕ್ಕಿಲ್ಲ.

‘ಅದು ನಮ್ಮ ಮೆಲೆ ಅವಲಂಬಿತವಾಗಿರಲಿಲ್ಲ. ನಾವು ಫಸ್ಟ್​ ಕ್ಲಾಸ್​​ ಪಂದ್ಯಗಳನ್ನಾಡಲು ಕೇಳಿದ್ದೆವು. ಆದ್ರೆ ಅದಕ್ಕೆ ಅನುಮತಿ ನೀಡಿಲ್ಲ. ನನಗೆ ಅದಕ್ಕೆ ಕಾರಣವೂ ತಿಳಿದಿಲ್ಲ. ಇದನ್ನ ಹೊರತುಪಡಿಸಿದಂತೆ ಸರಣಿಗೆ ತಯಾರಾಗಲು ನಮ್ಮಲ್ಲಿ ಸಾಕಷ್ಟು ಸಮಯವಿದೆ’

ವಿರಾಟ್​ ಕೊಹ್ಲಿ, ಟೀಂ ಇಂಡಿಯಾ ನಾಯಕ

ಕೊರೊನಾ ಕಾರಣದಿಂದ ಅನುಮತಿ ನೀಡದ ECB​..?
ಸದ್ಯ ಬಿಸಿಸಿಐ ಇಂಗ್ಲೆಂಡ್​ ಲಯನ್ಸ್​ ಅಥವಾ ಇನ್ಯಾವುದಾದರೂ ಕೌಂಟಿ ತಂಡದ ಎದುರು ಫಸ್ಟ್​​ ಕ್ಲಾಸ್​​ ಕ್ರಿಕೆಟ್​ ಆಯೋಜನೆಗೆ ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​ಗೆ ಮನವಿ ಮಾಡಿದೆ. ಆದ್ರೆ, ಬಿಸಿಸಿಐ ಮನವಿಗೆ ಕೊರೊನಾ ಕಾರಣ ನೀಡಿರುವ ಇಸಿಬಿ ಅನುಮತಿ ನೀಡಲು ಹಿಂದೇಟು ಹಾಕ್ತಿದೆ. 3 ವಾರಗಳ ವಿಶ್ರಾಂತಿ ಬಳಿಕ ಜುಲೈ 16 ಅಥವಾ 17ರಿಂದ ಅಭ್ಯಾಸ ಪಂದ್ಯಗಳನ್ನಾಡೋ ಪ್ಲಾನ್​ ಮಾಡಿಕೊಂಡಿರುವ ಟೀಮ್​ ಇಂಡಿಯಾ, ಅನುಮತಿ ಸಿಗದಿದ್ರೆ ಇಂಟ್ರಾ ಸ್ಕ್ವಾಡ್​ ಪಂದ್ಯಗಳನ್ನಾಡೋ ಯೋಜನೆ ಹಾಕಿಕೊಂಡಿದೆ.
ಒಟ್ಟಿನಲ್ಲಿ ಅಭ್ಯಾಸದ ಕೊರತೆಯಿಂದ ಮಹತ್ವದ ಐಸಿಸಿ ಪಂದ್ಯವನ್ನ ಕೈ ಚೆಲ್ಲಿರುವ ಟೀಮ್​ಇಂಡಿಯಾ ಇಂಗ್ಲೆಂಡ್​​ ಸರಣಿಯಲ್ಲಾದ್ರೂ ಗೆಲುವನ್ನ ಎದುರು ನೋಡ್ತಿದೆ. ಸರಣಿಗೆ ತಿಂಗಳಿಗಿಂತ ಹೆಚ್ಚು ಬ್ರೇಕ್​ ಇರೋದ್ರಿಂತ ಸೂಕ್ತ ಸಿದ್ಧತೆಗೆ ಸಮಯವೂ ಇದೆ. ಅದನ್ನ ಕೊಹ್ಲಿ ಪಡೆ ಹೇಗೆ ಬಳಸಿಕೊಳ್ಳುತ್ತೆ ಅನ್ನೋದನ್ನ ನೋಡಬೇಕಿದೆ.

The post WTC ಫೈನಲ್​​ ಸೋಲಿನಿಂದ ಪಾಠ ಕಲಿಯಲು ಮುಂದಾದ ಟೀಮ್ ಇಂಡಿಯಾ appeared first on News First Kannada.

Source: newsfirstlive.com

Source link