ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಮೊದಲ ದಿನದಾಟ ಮಳೆಯಿಂದ ರದ್ದಾದ್ರೆ, 2ನೇ ದಿನದಾಟ ಮಂದ ಬೆಳಕಿನ ಕಾರಣ ಪಂದ್ಯ ಬೇಗನೆ ಅಂತ್ಯವಾಯ್ತು. ಆದರೆ ಭಾನುವಾರ ನ್ಯೂಜಿಲೆಂಡ್​​ ವೇಗಿಗಳ ಚಾಣಾಕ್ಷ ನಡೆಯ ಮುಂದೆ ಭಾರತೀಯ ಬ್ಯಾಟ್ಸ್​ಮನ್​ಗಳು ಮಂಕಾದ್ರು.

ಅಗ್ರ 3 ವಿಕೆಟ್​ ಕಳೆದುಕೊಂಡು 146 ರನ್​ಗಳಿಂದ 3ನೇ ದಿನದಾಟ ಆರಂಭಿಸಿದ ಭಾರತ, 92.1 ಓವರ್​​​ಗಳಲ್ಲಿ 217 ರನ್​​​​ಗಳ ಸಾಧಾರಣ ಮೊತ್ತ ಕಲೆಹಾಕಲಷ್ಟೇ ಶಕ್ತವಾಯ್ತು. ಕಿವೀಸ್​ ಸ್ಪೀಡ್​ ಸ್ಟಾರ್​​​ಗಳ ಎದುರು ಕೊಹ್ಲಿ ಸೇನೆ ದಿಢೀರ್​ ಕುಸಿತ ಕಂಡ್ರೆ, ಕಿವೀಸ್​ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ಮಾಡ್ತಿದೆ.

ದಿನದಾಟದ ಆರಂಭದಲ್ಲೇ ಆಘಾತ ನೀಡಿದ ಆರ್​ಸಿಬಿ ವೇಗಿ
ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾಗಿದ್ದ ವಿರಾಟ್​ ಕೊಹ್ಲಿ, ಅಚಲ ವಿಶ್ವಾಸದೊಂದಿಗೆ ಮೂರನೇ ದಿನದಾಟ ಮುಂದುವರೆಸಿದ್ರು. ಆದರೆ ಕೈಲ್​ ಜೆಮಿಸನ್​ರ​ ಸಂಘಟಿತ ದಾಳಿಗೆ ಉತ್ತರ ನೀಡುವಲ್ಲಿ ಫೇಲ್​ ಆದ್ರು. 44 ರನ್​ ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದ ಕ್ಯಾಪ್ಟನ್​, ನಿನ್ನೆ ಒಂದೂ ರನ್​ ಗಳಿಸಿದೆ ಎಲ್​ಬಿ ಬಲೆಗೆ ಬಿದ್ರು. ಇನ್ನು ಭರವಸೆ ಮೂಡಿಸಿದ್ದ ರಿಷಭ್​ ಪಂತ್​ ಆಟ ಕೂಡ 4 ರನ್​ಗೆ ಅಂತ್ಯವಾಯ್ತು. ಪಂತ್​​​ರ ವೀಕ್​​ನೆಸ್​​​ ಅನ್ನೇ ಗುರಿಯಾಗಿಸಿಕೊಂಡು ಜೆಮಿಸನ್​​, ಪಕ್ಕಾ ಪ್ಲಾನ್​ನೊಂದಿಗೆ ಖೆಡ್ಡಾಕೆ ಬೀಳಿಸಿದ್ರು.

ಆಪತ್ಬಾಂಧವನ ಅರ್ಧಶತಕ ತಪ್ಪಿಸಿದ ನೀಲ್​ ವ್ಯಾಗ್ನರ್​​..!
28 ರನ್​ ಗಳಿಸಿ ಕ್ರೀಸ್​ ಕಾಯ್ದುಕೊಂಡಿದ್ದ ಅಜಿಂಕ್ಯಾ ರಹಾನೆ, ಸತತ ವಿಕೆಟ್​ ಕಳೆದುಕೊಳ್ತಿದ್ರೂ ತಂಡಕ್ಕೆ ಆಪತ್ಬಾಂದವನಾಗಿದ್ದ. ಆದರೆ ವ್ಯಾಗ್ನರ್​​ ತನ್ನ ಮೈಂಡ್​ ಬ್ಲೋಯಿಂಗ್​​​ ಬೌಲಿಂಗ್​​ ಮೂಲಕ ರಹಾನೆಯನ್ನ ಔಟ್​ ಮಾಡಿದ್ದಲ್ಲದೆ, ಕೇವಲ 1 ರನ್ನಿಂದ್​ ಅರ್ಧಶತಕ ತಪ್ಪಿಸಿದ್ರು. ಇನ್ನು 22 ರನ್​ ಪೇರಿಸಿದ ರವಿಚಂದ್ರನ್​ ಅಶ್ವಿನ್​ ತಂಡದ ಮೊತ್ತ 200ರ ಗಡಿ ದಾಟಿಸಿ ಸೌಥಿಗೆ ಬಲಿಯಾದ್ರು.

ದಿಢೀರ್​​ ಕುಸಿತ ಕಂಡ ಭಾರತದ ಕೆಳ ಕ್ರಮಾಂಕ..!
ಮೊದಲ ಸೆಷನ್​​ ಅಂತ್ಯದಲ್ಲಿ 7 ವಿಕೆಟ್ ಕಳೆದುಕೊಂಡಿದ್ದ ಟೀಮ್​ ಇಂಡಿಯಾ 211 ರನ್ ಪೇರಿಸಿತ್ತು. ಬಳಿಕ ಎರಡನೇ ಸೆಷನ್​​ ಆರಂಭದಲ್ಲಿ 7ರನ್​ ಅಷ್ಟೇ ಕೆಲ ಹಾಕಿದ ಭಾರತ, 217ಕ್ಕೆ ಎಲ್ಲಾ ವಿಕೆಟ್​ಗಳನ್ನ ಕಳೆದುಕೊಳ್ತು. ಜೆಮಿಸನ್​ ಓವರ್​ನಲ್ಲಿ ಇಶಾಂತ್​ ಶರ್ಮಾ, ಶೂನ್ಯಕ್ಕೆ ಜಸ್​​ಪ್ರಿತ್​ ಬುಮ್ರಾ ಔಟಾದ್ರೆ, 15ರನ್​ಗೆ ಜಡೇಜಾ ಬೋಲ್ಟ್​ಗೆ ವಿಕೆಟ್​ ಒಪ್ಪಿಸಿದ್ರು. ಭಾರತ 3ನೇ ದಿನದಾಟದಲ್ಲಿ 71 ರನ್​​ಗೆ 7 ವಿಕೆಟ್​ ಕಳೆದುಕೊಳ್ತು

ಟೀಮ್​ ಇಂಡಿಯಾಕ್ಕೆ ಕಂಟಕವಾದ ಜೆಮಿಸನ್​ಗೆ 5 ವಿಕೆಟ್
ತೇವದ ಪಿಚ್​​ನ ನೆರವು ಪಡೆದ ಕಿವೀಸ್​ ಬೌಲರ್​ಗಳು, ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳ ಮೇಲೆ ಸವಾರಿ ಮಾಡಿದ್ರು. ಅದ್ರಲ್ಲೂ ಕೈಲ್​ ಜೆಮಿಸನ್​​ 5 ವಿಕೆಟ್ ಕಬಳಿಸಿ, ಕೊಹ್ಲಿ ಸೇನೆಗೆ ಕಂಟಕವಾದ್ರು. ಈ ಮೂಲಕ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​​ ಫೈವ್​ ಫಿಫರ್​ ಪಡೆದ ಮೊದಲ ಬೌಲರ್​ ಎನಿಸಿಕೊಂಡ್ರು. ರೋಹಿತ್​, ಕೊಹ್ಲಿ, ಪಂತ್​ ವಿಕೆಟ್​ಗಳನ್ನೇ ತನ್ನ ಬುಟ್ಟಿಗೆ ಹಾಕಿಕೊಂಡು, ಭಾರತ ದಿಢೀರ್ ಕುಸಿತಕ್ಕೆ ಕಾರಣರಾದ್ರು. ಅಲ್ಲದೆ ವ್ಯಾಗ್ನರ್​, ಬೋಲ್ಟ್​ ತಲಾ 2 ವಿಕೆಟ್​, ಸೌಥಿ 1 ವಿಕೆಟ್​ ಕಬಳಿಸಿ ಮಿಂಚಿದ್ರು.

ಉತ್ತಮ ಆರಂಭ ಪಡೆದ ಕಿವೀಸ್​​- ಬ್ರೇಕ್​​ಥ್ರೂ ಕೊಟ್ಟ ಅಶ್ವಿನ್​​​
ಇನ್ನು ಮೊದಲ ಇನ್ನಿಂಗ್ಸ್​ ಆರಂಭಿಸಿದ ಕಿವೀಸ್​ ಪಡೆ ಉತ್ತಮ ಆರಂಭವನ್ನೇ ನೀಡ್ತು. ಆರಂಭಿಕರಾಗಿ ಕಣಕ್ಕಿಳಿದ ಡೆವೋನ್​ ಕಾನ್ವೆ ಆ್ಯಂಡ್​​ ಟಾಮ್​ ಲಾಥಮ್​ ಉತ್ತಮ ಭದ್ರಬುನಾದಿಯನ್ನೇ ಹಾಕಿಕೊಟ್ರು. ಟೀಮ್​ ಇಂಡಿಯಾ ಬೌಲರ್​​ಗಳ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಈ ಜೋಡಿ ಮೊದಲ ವಿಕೆಟ್​ಗೆ 70 ರನ್​ ಜೊತೆಯಾಟವಾಡಿದ್ರು. ಅಶ್ವಿನ್​ ಓವರ್​​ನಲ್ಲಿ ಕವರ್​​ಡ್ರೈವ್​ ಮಾಡಿದ ಲಾಥಮ್​​​​, ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್​​ಗೆ ನಿರ್ಗಮಿಸಿದ್ರು.

ಫೈನಲ್​ ಪಂದ್ಯದಲ್ಲಿ ಅರ್ಧಶತಕ ಪೂರೈಸಿದ ಡೆವೋನ್​ ಕಾನ್ವೆ, ಅವಿಸ್ಮರಣೀಯಗೊಳಿಸಿಕೊಂಡ್ರು. ಹಾಫ್​ ಸೆಂಚುರಿ ಸಿಡಿಸಿದ ಬೆನ್ನಲ್ಲೇ ಇಶಾಂತ್​ ಶರ್ಮಾ ಬೌಲಿಂಗ್​​ನಲ್ಲಿ ಔಟಾದ್ರು. ಇನ್ನು 12 ಗಳಿಸಿದ ಕೇನ್​ ವಿಲಿಯಮ್ಸನ್​ ಮತ್ತು ರಾಸ್​​ ಟೇಲರ್ ಕ್ರೀಸ್​ ಕಾಯ್ದುಕೊಂಡಿದ್ದಾರೆ. 3ನೇ ದಿನದಾಟದ ಅಂತ್ಯಕ್ಕೆ ಕಿವೀಸ್, 49 ಓವರ್​​ಗಳಲ್ಲಿ 101ರನ್ ಕಲೆ ಹಾಕಿ 2 ವಿಕೆಟ್ ಕಳೆದುಕೊಂಡಿದೆ.

ಒಟ್ನಲ್ಲಿ ಟೀಮ್​ ಇಂಡಿಯಾ, ಕಿವೀಸ್​​​ ಬೌಲರ್​​​ಗಳ ಮುಂದೆ ಮಂಕಾದ್ರೆ, ನ್ಯೂಜಿಲೆಂಡ್​ ಬ್ಯಾಟ್ಸ್​​ಮನ್​​​ಗಳು ಭಾರತದ ಬೌಲರ್​​​ಗಳ ಮೇಲೆ ಸವಾರಿ ಮಾಡಿದ್ದಾರೆ.

The post WTC ಫೈನಲ್: ಕೊಹ್ಲಿ ಪಡೆಗೆ ಮುಳುವಾದ ಆರ್​​ಸಿಬಿ ವೇಗಿ! appeared first on News First Kannada.

Source: newsfirstlive.com

Source link