Yash Boss: ‘ಬಾಸ್’​ ಸ್ಥಾನ ಪಡೆದುಕೊಂಡ ಯಶ್​; ದೇಶಾದ್ಯಂತ ಟ್ರೆಂಡ್​ ಆಗಿದೆ ಈ ಹೆಸರು | Yash Boss twitter trending as KGF Chapter 2 gets super response from nation wide audience


Yash Boss: ‘ಬಾಸ್’​ ಸ್ಥಾನ ಪಡೆದುಕೊಂಡ ಯಶ್​; ದೇಶಾದ್ಯಂತ ಟ್ರೆಂಡ್​ ಆಗಿದೆ ಈ ಹೆಸರು

ಯಶ್

ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಬಾಸ್​ ಅಂತ ಕರೆಯೋದು ವಾಡಿಕೆ. ಆದರೆ ಅದೇ ಬಾಸ್​ ಎಂಬ ವಿಚಾರವನ್ನು ಇಟ್ಟುಕೊಂಡು ಕೆಲವೊಮ್ಮೆ ಬೇರೆ ಬೇರೆ ಹೀರೋಗಳ ಫ್ಯಾನ್ಸ್​ ಕಿತ್ತಾಟ ಮಾಡಿಕೊಂಡಿದ್ದುಂಟು. ಅದೇನೇ ಇರಲಿ, ಈಗಂತೂ ನಟ ಯಶ್​ (Yash) ಅವರು ಬಾಸ್​ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. ಹಲವು ವರ್ಷಗಳ ಪರಿಶ್ರಮದಿಂದ ಮೂಡಿಬಂದ ಅವರ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಬಿಡುಗಡೆ ಆಗಿದೆ. ವಿಶ್ವಾದ್ಯಂತ ಈ ಚಿತ್ರ ಹವಾ ಮಾಡುತ್ತಿದೆ. ಈ ಗೆಲುವಿನಿಂದ ಖುಷಿ ಆಗಿರುವ ಅಭಿಮಾನಿಗಳು ‘ಯಶ್​ ಬಾಸ್​’ (Yash Boss) ಎಂದು ಜೈಕಾರ ಹಾಕುತ್ತಿದ್ದಾರೆ. ಟ್ವಿಟರ್​ನಲ್ಲಿ ಇಂದು (ಏ.14) ಬರೀ ಯಶ್​ ಅವರದ್ದೇ ಆರ್ಭಟ. ಈ ಸಿನಿಮಾಗೆ ಸಂಬಂಧಿಸಿದ ಅನೇಕ ವಿಚಾರಗಳು ಟ್ರೆಂಡ್​ ಆಗುತ್ತಿವೆ. ಆ ಪೈಕಿ #YashBoss ಎಂಬ ಹ್ಯಾಶ್​ ಟ್ಯಾಗ್​ ದೇಶಾದ್ಯಂತ ಗಮನ ಸೆಳೆಯುತ್ತಿದೆ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಮೂಲಕ ಯಶ್​ ಮಾಡಿದ ಸಾಧನೆಗೆ ಎಲ್ಲರೂ ಭೇಷ್​ ಎನ್ನುತ್ತಿದ್ದಾರೆ. ಒಟ್ಟಾರೆಯಾಗಿ ಅವರಿಗೆ ಈ ಸಿನಿಮಾದಿಂದ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿದೆ.

ಯಶ್​ ನಡೆದು ಬಂದು ಹಾದಿ ಸುಲಭದ್ದಾಗಿರಲಿಲ್ಲ. ಇಂದು ಅವರು ಸೂಪರ್​ ಸ್ಟಾರ್​ ಆಗಿದ್ದಾರೆ. ಆದರೆ ಆರಂಭದ ದಿನಗಳಲ್ಲಿ ಸಖತ್​ ಕಷ್ಟಪಟ್ಟಿದ್ದರು. ಅವಕಾಶಕ್ಕಾಗಿ ಅಲೆದಿದ್ದರು. ಕಿರುತೆರೆ ಧಾರಾವಾಹಿಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ಮಾಡಿದ್ದರು. ಬೆಂಗಳೂರಿನಲ್ಲಿ ಉಳಿದುಕೊಳ್ಳಲು ಜಾಗ ಇಲ್ಲದೇ ನೋವು ಅನುಭವಿಸಿದ್ದರು. ಆದರೆ ಅದೇ ಯಶ್​ ಈಗ ‘ಯಶ್​ ಬಾಸ್​’ ಎನಿಸಿಕೊಳ್ಳುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.

ಎಲ್ಲ ಬಗೆಯ ಪಾತ್ರಗಳನ್ನೂ ಮಾಡಿ ಅವರು​ ಸೈ ಎನಿಸಿಕೊಂಡಿದ್ದಾರೆ. ವೃತ್ತಿಜೀವನದ ಈ ದೀರ್ಘ ಪಯಣದಲ್ಲಿ ಅವರು ಲವರ್​ ಬಾಯ್​ ಆಗಿ ಮಿಂಚಿದರು, ಕಾಮಿಡಿ ಸಿನಿಮಾಗಳನ್ನು ಮಾಡಿ ಗೆದ್ದರು, ಮಾಸ್​ ಹೀರೋ ಆಗಿ ಅಬ್ಬರಿಸಿದರು. ಏನೇ ಮಾಡಿದರೂ ಅದನ್ನು ಪ್ರಾಮಾಣಿಕವಾಗಿ ಮಾಡಿದರು. ಅದೇ ಅವರ ಗೆಲುವಿಗೆ ಕಾರಣ ಎಂದರೂ ತಪ್ಪಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಯಶ್​ ಅವರಿಗೆ ಇರುವ ಗುರಿ ಮತ್ತು ದೂರದೃಷ್ಟಿ ಗಮನಾರ್ಹ. ಕನ್ನಡ ಚಿತ್ರರಂಗವನ್ನು ಬೇರೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಅವರು ಬಹಳ ವರ್ಷಗಳ ಹಿಂದೆಯೇ ಹೇಳಿದ್ದರು. ಆಗಿನ್ನೂ ‘ಕೆಜಿಎಫ್​’ ಸಿನಿಮಾ ಅನೌನ್ಸ್​ ಕೂಡ ಆಗಿರಲಿಲ್ಲ. ಅಂದು ಆಡಿದ ಮಾತನ್ನು ಯಶ್​ ನಿಜ ಮಾಡಿ ತೋರಿಸಿದ್ದಾರೆ.

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ಯಶ್​ ಅವರು ‘ವರ್ಲ್ಡ್​ ಈಸ್​ ಮೈ ಟೆರಿಟರಿ’ ಎಂದು ಡೈಲಾಗ್​ ಹೊಡೆದಿದ್ದಾರೆ. ಈಗ ಅವರು ಚಿತ್ರರಂಗದಲ್ಲಿ ಇಡುತ್ತಿರುವ ಹೆಜ್ಜೆಗಳನ್ನು ನೋಡಿದರೆ ರಿಯಲ್​ ಲೈಫ್​ನಲ್ಲಿಯೂ ಆ ಮಾತನ್ನು ಅವರು ಸಾಬೀತು ಮಾಡುವಂತಿದೆ. ಮೊದಲು ಕೇವಲ ಕನ್ನಡ ಚಿತ್ರರಂಗದ ಹೀರೋ ಆಗಿದ್ದ ಅವರು ಈಗ ಪ್ಯಾನ್​ ಇಂಡಿಯಾ ಹೀರೋ ಆಗಿದ್ದಾರೆ. ವಿದೇಶದಲ್ಲೂ ಅವರ ಸಿನಿಮಾ ಅತ್ಯುತ್ತಮವಾಗಿ ಪ್ರದರ್ಶನ ಕಾಣತ್ತಿದೆ. ಆ ಮೂಲಕ ಭಾರತದ ಗಡಿಯನ್ನೂ ದಾಟಿ ಅವರು ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ.

ನಿರ್ದೇಶಕ ಪ್ರಶಾಂತ್​ ನೀಲ್​ ಮತ್ತು ನಿರ್ಮಾಪಕ ವಿಜಯ್​ ಕಿರಗಂದೂರು ಅವರ ಜೊತೆ ಸೇರಿ ಯಶ್ ಅವರು ‘ಕೆಜಿಎಫ್​: ಚಾಪ್ಟರ್​ 2’ ಮೂಲಕ​ ದೊಡ್ಡ ಗೆಲುವು ಕಂಡಿದ್ದಾರೆ. ಅವರು ನಟಿಸಲಿರುವ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಜನರಿಗೆ ನಿರೀಕ್ಷೆ ಇದೆ. ‘ಕೆಜಿಎಫ್​ 2’ ರೀತಿಯ ದೈತ್ಯ ಸಿನಿಮಾವನ್ನು ಮಾಡಿದ ಬಳಿಕ ಯಶ್​ ಇಡುವ ಮುಂದಿನ ಹೆಜ್ಜೆ ಇನ್ನೆಷ್ಟು ದೊಡ್ಡದಾಗಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಯಶ್​ ಜೊತೆ ಕೆಲಸ ಮಾಡಲು ಭಾರತೀಯ ಚಿತ್ರರಂಗದ ಅನೇಕ ಘಟಾನುಘಟಿಗಳು ಈಗ ತುದಿಗಾಲಿನಲ್ಲಿ ನಿಂತಿದ್ದಾರೆ. ಅವರ ಕಾಲ್​ಶೀಟ್​ ಪಡೆಯಲು ನಿರ್ಮಾಪಕರು ಹಾತೊರೆಯುತ್ತಿದ್ದಾರೆ.

TV9 Kannada


Leave a Reply

Your email address will not be published.