Yash Dhull
ಟೀಮ್ ಇಂಡಿಯಾ ಅಂಡರ್-19 ತಂಡದ ನಾಯಕ ಯಶ್ ಧುಲ್ ರಣಜಿ ಟ್ರೋಫಿ ಕ್ರಿಕೆಟ್ನಲ್ಲಿ ಶತಕದೊಂದಿಗೆ ಪಾದಾರ್ಪಣೆ ಮಾಡಿದ್ದಾರೆ. ತಮಿಳುನಾಡುವ ವಿರುದ್ದದ ಪಂದ್ಯದಲ್ಲಿ ದೆಹಲಿ ಪರ ಆರಂಭಿಕನಾಗಿ ಹೊಸ ಇನಿಂಗ್ಸ್ ಆರಂಭಿಸಿರುವ ಯಶ್ ಮೊದಲ ಪಂದ್ಯದಲ್ಲೇ ಸೆಂಚುರಿ ಬಾರಿಸಿ ಎಲ್ಲರ ಗಮನ ಸೆಳೆದರು. ಆರಂಭದಿಂದಲೂ ಬಿರುಸಿನ ಇನಿಂಗ್ಸ್ ಆಡಿದ ಯಶ್ ಧುಲ್ ಅರ್ಧಶತಕ ಪೂರೈಸಲು 57 ಎಸೆತಗಳನ್ನು ತೆಗೆದುಕೊಂಡರು. ಇದಾದ ಬಳಿಕ ದೊಡ್ಡ ಇನಿಂಗ್ಸ್ನತ್ತ ಮುಖ ಮಾಡಿದ ಯುವ 133 ಎಸೆತಗಳಲ್ಲಿ ಚೊಚ್ಚಲ ರಣಜಿ ಶತಕ ಪೂರೈಸಿದರು. ಅದು ಕೂಡ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವ ಮೂಲಕ ಎಂಬುದು ವಿಶೇಷ.
ಏಕೆಂದರೆ ದೆಹಲಿ ತಂಡವು ಕೇವಲ 7 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಈ ಹಂತದಲ್ಲಿ ಎಚ್ಚರಿಕೆಯ ಆಟವಾಡಿದ 19 ವರ್ಷದ ಯಶ್ ಧುಲ್ ತಂಡವನ್ನು ಮುನ್ನಡೆ ಸಾಧಿಸಿದರು. ಮೂರನೇ ವಿಕೆಟ್ಗೆ ನಿತೀಶ್ ರಾಣಾ ಅವರೊಂದಿಗೆ ಅದ್ಭುತ ಅರ್ಧಶತಕದ ಜೊತೆಯಾಟವಾಡಿದರು. 25 ರನ್ಗಳಿಸಿ ರಾಣಾ ಔಟ್ ಆಗಿ ಹೊರನಡೆದರೂ, ಮತ್ತೊಂದೆಡೆ ಯಶ್ ಧುಲ್ ತಮಿಳುನಾಡು ಬೌಲರುಗಳನ್ನು ನಿರಾಯಾಸವಾಗಿ ಎದುರಿಸಿ ಶತಕ ಸಿಡಿಸಿದರು.
ಇನ್ನು 4ನೇ ವಿಕೆಟ್ಗೆ ಜಾಂಟಿ ಸಿಧು ಜೊತೆ ಶತಕದ ಜೊತೆಯಾಟವಾಡುವ ಮೂಲಕ 67 ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ದೆಹಲಿ ತಂಡವನ್ನು ಯಶ್ ಧುಲ್ 200 ರ ಗಡಿದಾಟಿಸಿದರು. ಈ ಮೂಲಕ ದೇಶೀಯ ಅಂಗಳದಲ್ಲಿ ಚೊಚ್ಚಲ ಪಂದ್ಯದಲ್ಲೇ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿಟ್ಟರು. ಇತ್ತೀಚೆಗಷ್ಟೇ ಅಂಡರ್ 19 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾವನ್ನು ಯಶ್ ಧುಲ್ ಮುನ್ನಡೆಸಿದ್ದರು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಧುಲ್ ಸೆಮಿಫೈನಲ್ ಗೆಲುವಿನ ರೂವಾರಿಯಾಗಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಈ ಬಾರಿ ದೆಹಲಿ ರಣಜಿ ತಂಡದಲ್ಲಿ 19 ರ ಹರೆಯದ ಯುವ ಆಟಗಾರನಿಗೆ ಚಾನ್ಸ್ ನೀಡಲಾಗಿತ್ತು.
A FC hundred on debut for Yash Dhull 👏👏👏pic.twitter.com/jgUrelwKlO
— Wisden India (@WisdenIndia) February 17, 2022
ಅಲ್ಲದೆ ದೆಹಲಿ ನಾಯಕ ಪ್ರದೀಪ್ ಸಾಂಗ್ವಾನ್ ಯುವ ಆಟಗಾರನ ಮೇಲೆ ನಂಬಿಕೆಯಿರಿಸಿ ಆರಂಭಿಕನಾಗಿ ಕಣಕ್ಕಿಳಿಸಿದ್ದರು. ಇದೀಗ ನಾಯಕನ ನಿರೀಕ್ಷೆಯನ್ನು ಹುಸಿಗೊಳಿಸದಂತೆ ಯಶ್ ಧುಲ್ ಚೊಚ್ಚಲ ಪಂದ್ಯದಲ್ಲೇ 113 ರನ್ ಬಾರಿಸುವ ಮೂಲಕ ಮಿಂಚಿದ್ದಾರೆ. ಅಂದಹಾಗೆ ಐಪಿಎಲ್ ಸೀಸನ್ 15 ಗಾಗಿ ಯಶ್ ಧುಲ್ ಅವರನ್ನು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 50 ಲಕ್ಷ ರೂ. ನೀಡಿ ಖರೀದಿಸಿದೆ.